ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಕಠಿಣ ಕ್ರಮ

crime
Published on

ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಮಂಗಳವಾರ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದರಲ್ಲದೆ, ನಗರದ ಹೆಬ್ಬಾಳು ಪೊಲೀಸ್ ಠಾಣೆ ಬಳಿ ರೌಡಿ ಶೀಟರ್‌ಗಳ ಪರೇಡ್ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ರೌಡಿ ಪರೇಡ್ ನಡೆಸಿದರು. ಮಂಗಳವಾರ ಬೆಳ್ಳಂಬೆಳಗ್ಗೆ ಮೈಸೂರಿನ ರೌಡಿ ಶೀಟರ್‌ಗಳಿಗೆ ಡ್ರಿಲ್ ಮಾಡಿರುವ ಪೊಲೀಸರು ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಹೆಬ್ಬಾಳು ಪೊಲೀಸ್ ಠಾಣೆಗೆ ಕರೆಸಿ ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಇದೇ ವೇಳೆ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಸಂಗ್ರಹಿಸದಂತೆ ಎಚ್ಚರಿಕೆ ನೀಡಿದ್ದು, ಸನ್ನಡತೆಯಿಂದ ನಡೆದುಕೊಳ್ಳುವಂತೆ ಹಲವು ರೌಡಿಗಳಿಂದ ಬಾಂಡ್ ಬರೆಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿಗಳಾದ ಶಿವಕುಮಾರ್, ಅಶ್ವತ್ಥನಾರಾಯಣ, ಶಶಿಧರ್, ಗಂಗಾಧರಸ್ವಾಮಿ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆದಿದೆ. ಮೈಸೂರು ನಗರ ಎಲ್ಲ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net