

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಹೆಂಗಿದ್ಯೋ.. ಎಂತಾರಾ ವಿಶೇಷಾ ಇದ್ದಾ... ಊಟಾ-ಆಸರಿ ಆತಾ... ಆ ಬದೀಗ್ ಹೊಕ್ಕ್ ಬತ್ತೆ ಆಗಾ..?
ಹೀಗೆ ಹವ್ಯಕರ ಮತ್ತು ಹಾಲಕ್ಕಿಗಳ ಮಾತುಗಳನ್ನು ಸ್ವೀಡನ್ ಟೋನ್ನಲ್ಲಿಯೇ ಆಡುತ್ತ ಆತ ಗೋಕರ್ಣದ ರಥ ಬೀದಿಯಲ್ಲಿ ಹೊರಟರೆ ಹಲವರಿಗೆ ಏನೋ ಸಂಭ್ರಮ. ಊರಿಂದ ನೆಂಟ ಬಂದಿದ್ದಾನೋ ಎನ್ನುವ ಭಾವ. ‘ಹ್ಯಾರಿ... ಯಾವಾಗ ಬಂದೆ? ಎಂದು ರಥಬೀದಿಯಲ್ಲಿನ ಚಿರಪರಿಚಿತರು ಕೂಗಿ ಕರೆದು ಮಾತನಾಡಿಸುತ್ತಾರೆ. ಹ್ಯಾರಿ ಈ ಸಲಾ ಮತ್ತ ಬಂದಾ ನೋಡಾ ಎಂದು ಆತನ ಬರುವಿಕೆಯ ಸುದ್ದಿ ಹಂಚಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಹ್ಯಾರಿ ಗೋಕರ್ಣದಲ್ಲಿ ಫೇಮಸ್!
ಸ್ವೀಡನ್ ದೇಶದ ಪ್ರಜೆ ಹ್ಯಾರಿ ಪೆರೊನಿಯಸ್ಗೆ ಗೋಕರ್ಣ, ಕುಡ್ಲೆ ಎಂದರೆ ಅಚ್ಚುಮೆಚ್ಚು. ಹ್ಯಾರಿ 23 ವರ್ಷದ ಯುವಕನಾಗಿದ್ದಾಗ 1986ರಲ್ಲಿ ಗೋಕರ್ಣಕ್ಕೆ ಮೊಟ್ಟ ಮೊದಲ ಬಾರಿಗೆ ಬಂದಿದ್ದರಂತೆ. ಆಗಿಂದ ಇಲ್ಲಿವರೆಗೆ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಾರೆ. ನವೆಂಬರ್, ಡಿಸೆಂಬರ್ನಲ್ಲಿ ಗೋಕರ್ಣಕ್ಕೆ ಹ್ಯಾರಿ ಹಾಜರ್. ಮೂರು ತಿಂಗಳು ಇದ್ದು ಮರಳುತ್ತಾರೆ.
ಹ್ಯಾರಿ 36 ವರ್ಷದಿಂದ ಸತತವಾಗಿ ಗೋಕರ್ಣಕ್ಕೆ ಬರುತ್ತಿದ್ದಾರೆ. ಕರೊನಾ ಕಾಲದಲ್ಲಿ ಮಾತ್ರ ಬರಲಾಗಲಿಲ್ಲವಂತೆ. ಪ್ರವಾಸಕ್ಕೆ ಹೀಗೆ ಬಂದು ಹಾಗೆ ಹಾರಿ ಹೋಗುವವರಲ್ಲ ಹ್ಯಾರಿ. ಹ್ಯಾರಿಗೆ ಗೋಕರ್ಣ ಹಿಡಿಸಿದರೆ, ಹ್ಯಾರಿ ಸ್ಥಳೀಯರಿಗೆ ಹಿಡಿಸಿದ್ದಾರೆ. ವಿಶೇಷವಾಗಿ ಹಾಲಕ್ಕಿಗಳ ಜೀವನ ಹ್ಯಾರಿಗೆ ಹಿಡಿಸಿತು. ಹ್ಯಾರಿಯ ಸರಳತೆ, ಭಾಷೆ ಕಲಿಯುವಿಕೆ, ಭಾರತೀಯ ಸಂಸ್ಕೃತಿ-ಸಂಪ್ರದಾಯದ ಮೇಲಿರುವ ನಂಬಿಕೆ ಮತ್ತು ಗೌರವಗಲಿಂದಾಗಿ ಆತನನ್ನು ಗೋಕರ್ಣಿಗರು ಇಷ್ಟ ಪಡುತ್ತಾರೆ. ಇಲ್ಲಿಗೆ ಬರುವ ಸಾವಿರಾರು ವಿದೇಶಿಗಳ ಮಧ್ಯೆ ಹ್ಯಾರಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.
36 ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ಗೋಕರ್ಣದಲ್ಲಿ ಆದ ಬದಲಾವಣೆಯನ್ನು ಹ್ಯಾರಿ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಇದುವರೆಗೆ ಕ್ಲಿಕ್ಕಿಸಿದ ಫೋಟೋಗಳನ್ನು ಮಾಹಿತಿ ಸಮೇತ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಇತ್ತೀಚೆಗಷ್ಟೆ ಎರಡನೇ ಆವೃತ್ತಿ ಬಿಡುಗಡೆಗೊಳಿಸಿದ್ದಾರೆ. ‘ಶಿವಾ ಮೂವ್ಸ್ ಆನ್ ಇನ್ ಗೋಕರ್ಣ’ ಪುಸ್ತಕದ ಹೊಸ ಆವೃತ್ತಿ ಈಗ ಓದುಗರ ಕೈಯಲ್ಲಿದೆ.
ಹ್ಯಾರಿ ವೃತ್ತಿಯಲ್ಲಿ ಫೋಟೋಗ್ರಾಫರ್. ಈವರೆಗೆ 40ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿದ್ದಾರೆ. ಆದರೆ, ಗೋಕರ್ಣದಷ್ಟು ಅಚ್ಚುಮೆಚ್ಚಿನ ತಾಣ ಜಗತ್ತಿನಲ್ಲಿ ಇನ್ನೊಂದು ಇಲ್ಲ ಅನ್ನಿಸಿದೆಯಂತೆ.
ಸಾಕ್ಷಾತ್ ಪರಶಿವನೇ ನೆಲೆಸಿರುವ ನೆಲ ಗೋಕರ್ಣ. ಶಿವನ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ. ನಾನೂ ಆ ಪರಶಿವನ ಸೆಳೆತಕ್ಕೆ ಒಳಗಾಗಿದ್ದೇನೆ. ಈ ನೆಲದೊಂದಿಗೆ ಯಾವುದೋ ಜನ್ಮದ ನಂಟಿರಬೇಕು. 36 ವರ್ಷದ ಹಿಂದಿನಿಂದ ಇಂದಿನವರೆಗಿನ ಗೋಕರ್ಣವನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ ಎನ್ನುತ್ತಾರೆ ಹ್ಯಾರಿ.
ಲಂಕಾಧಿಪತಿ ರಾವಣನು ಶಿವನ ಕುರಿತು ತಪಸ್ಸು ಮಾಡಿ ಆತ್ಮಲಿಂಗವನ್ನು ಕೈಲಾಸ ಪರ್ವತದಿಂದ ಗೋಕರ್ಣಕ್ಕೆ ತಂದಿದ್ದು, ಆ ಆತ್ಮಲಿಂಗವನ್ನು ಗೋಕರ್ಣದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದು ಹ್ಯಾರಿಗೆ ಗೊತ್ತು. ಕ್ರಿ.ಶ. 4ನೇ ಶತಮಾನದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ವಿುತವಾಗಿದೆ. ಮಯೂರಶರ್ಮನ ಮಗ ರಾಜ ಕಂಗವರ್ಮ ದೇವಾಲಯದಲ್ಲಿ ಆಡಳಿತವನ್ನು ನಿರ್ವಹಿಸಲು ವಿವಿಧ ವಂಶಗಳಿಂದ ಬ್ರಾಹ್ಮಣ ಕುಟುಂಬಗಳನ್ನು ಇಲ್ಲಿಗೆ ಕರೆತಂದನು ಎನ್ನುವ ಮಾಹಿತಿ, ಈ ದೇವಾಲಯವು ಕರ್ನಾಟಕದ ಏಳು ಪವಿತ್ರ ಮುಕ್ತಿ ಕ್ಷೇತ್ರಗಳಲ್ಲಿ (ಮೋಕ್ಷದ ಸ್ಥಳಗಳು) ಒಂದಾಗಿದೆ. ಹಿಂದುಗಳು ತಮ್ಮನ್ನು ಅಗಲಿದವರಿಗೆ ವಿಧಿವಿಧಾನಗಳನ್ನು (ಮರಣೋತ್ತರ ಸಂಸ್ಕಾರ) ಮಾಡುವ ಸ್ಥಳವಾಗಿದೆ ಎಂಬೆಲ್ಲ ಮಾಹಿತಿಯನ್ನು ಗೋಕರ್ಣವನ್ನು ನೋಡಲು ಬಂದ ಪ್ರವಾಸಿಗರಿಗೆ ಹ್ಯಾರಿಯೇ ವಿವರಿಸುವುದುಂಟು!
ಮೊದಲು ಗೋಕರ್ಣಕ್ಕೆ ಬಂದಾಗ ಹ್ಯಾರಿ ಬಳಿ ಕಪ್ಪು-ಬಿಳುಪು ಚಿತ್ರವನ್ನು ಸೆರೆಹಿಡಿಯುವ ಕ್ಯಾಮರಾ ಇತ್ತು. ಆಗಿನ ಕಾಲದಲ್ಲಿ ಕ್ಯಾಮರಾ ಎಂದರೇ ಹಬ್ಬ. ಹ್ಯಾರಿ ಗೋಕರ್ಣ ಬೀದಿಯಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ಹೊರಟರೆ ಜನ ನಿಂತು ನೋಡುತ್ತಿದ್ದರಂತೆ. ಗೋಕರ್ಣದ ರಥ ಬೀದಿ ನೋಡುವುದೇ ಹಬ್ಬ. ಶಿವರಾತ್ರಿಯ ವೇಳೆ ಇಲ್ಲಿ ರಥ ಎಳೆಯಲಾಗುತ್ತದೆ. 1988ರಲ್ಲಿ ರಥ ಬೀದಿ ಹೇಗಿತ್ತು? ಈಗ ಹೇಗಿದೆ ಎನ್ನುವುದನ್ನು ಹ್ಯಾರಿ ಸೆರೆಹಿಡಿದಿದ್ದಾರೆ. ಅಂದು ರಥ ಕಟ್ಟುತ್ತಿದ್ದ ಕರಿಯಣ್ಣ ಜುಂಜಾ, ಹೊನ್ನಾ ಬೀರಾ, ಶಂಕರ, ಮಂಕಾಳಿ ಮಹಾಬಲೇಶ್ವರ ಗೌಡ, ಪೊಂಡು, ಮಹಾಬಳೇಶ್ವರ, ನಾರಾಯಣ ಜುಟ್ಟು, ಸುಕ್ರು ಗೌಡ, ಕಡಬಾ ಗಣಪತಿ, ಸುಕ್ರು ಹೊಸಬು, ಶಂಕರ ಹೊನ್ನಾ ಫೋಟೋದಲ್ಲಿ ಸೆರೆಯಾಗಿದ್ದಾರೆ.
ಗೋಕರ್ಣದಲ್ಲಿ ನಿತ್ಯದ ಜನಜೀವನ ಹೇಗಿರುತ್ತದೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ಹಾಗೆ ಕ್ಲಿಕ್ಕಿಸಿದ್ದಾರೆ. ಸಂತೋಷ ಭಾಗವತ ಹಾಲಿ ಫ್ಲೋರಿಡಾದ ಗಣೇಶ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಅವರು 8 ವರ್ಷದವರಾಗಿದ್ದಾಗ ಅಂದರೆ 1988ರಲ್ಲಿ ಮಹಾಬಲೇಶ್ವರ ನಾರಾಯಣ ಭಟ್ಟರ ಬಳಿ ವೈದಿಕ ಪಾಠ ಕಲಿಯುತ್ತಿರುವ ಕಪ್ಪು ಬಿಳುಪಿನ ಸುಂದರ ಚಿತ್ರ ಕಣ್ಮನ ಸೆಳೆಯುತ್ತದೆ. 1987ರಲ್ಲಿ ರಾಮ ದೇವಸ್ಥಾನದಲ್ಲಿದ್ದ ಜಡೆ ಬಾಬಾ, ಮಾರುತಿ ಮಹಾಲೆ ಅವರ ಕ್ಷೌರದ ಅಂಗಡಿಯಲ್ಲಿ ವಿದೇಶಿಗರು ಕ್ಷೌರ ಮಾಡಿಸಿಕೊಳ್ಳುತ್ತಿರುವ ಅಂದಿನ ಮತ್ತು ಇಂದಿನ ದೃಶ್ಯ, ಹಾಲಕ್ಕಿಗಳ ಬದುಕಿನ ಮೇಲೆ ಬೆಳಕು ಚೆಲ್ಲುವ 1987-88ರ ಚಿತ್ರಗಳು, 1988ರಲ್ಲಿ ತಿಮ್ಮಪ್ಪ ರಮಾಕಾಂತ ಮಲ್ಲಣ್ಣಅವರ ತೆಂಗಿನಕಾಯಿ ಅಂಗಡಿ, ಚಿಂಟುವಿನ ಸೋಡಾ ಅಂಗಡಿ, ಪಾರ್ವತಿಯ ಪಾನ್ಶಾಪ್, ನಾರಾಯಣ ಪೈ ಅವರು ಆರಂಭಿಸಿದ್ದ ಎಸ್ಟಿಡಿ ಬೂತ್, ಕೃಷ್ಣಾ ಟೈಲರ್, ಚಿದಾನಂದ ಕೊಡ್ಲಕೆರೆ ಅವರ ಐಸ್ಕ್ರೀಮ್ ಪಾರ್ಲರ್, ಕುಡ್ಲೆಯ ಶಾಲೆ, ಅಪ್ಪ ಮಾಬು ಅವರ ಹೆಗಲೇರಿದ್ದ ಮಗಳು ರಾಜಿಯ 1988ರಲ್ಲಿ ಮತ್ತು 2013ರಲ್ಲಿ ಅಪ್ಪನ ಜತೆಗಿದ್ದು ತೆಗೆಯಿಸಿಕೊಂಡ ಫೋಟೋ, ಓಂ ಮತ್ತು ಕುಡ್ಲೆ ಬೀಚ್ನಲ್ಲಿಯ ದೃಶ್ಯಗಳನ್ನು ಹ್ಯಾರಿ ಸೆರೆಹಿಡಿದಿದ್ದು, ಆಯ್ದ ಫೋಟೋಗಳನ್ನು ಮಾತ್ರ ಪುಸ್ತಕದಲ್ಲಿ ಮಾಹಿತಿ, ಹೆಸರು ಸಮೇತ ಪ್ರಕಟಿಸಿದ್ದಾರೆ. ಹ್ಯಾರಿ ಗೋಕರ್ಣದ ರಥ ಬೀದಿಯಲ್ಲೇ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆ ಮಾಡಿದ್ದಾರೆ.
ನಾನು 1986ರಲ್ಲಿ ಸ್ವೀಡನ್ನಲ್ಲಿ ಡಾಕ್ಯುಮೆಂಟರಿ ಫೋಟೋಗ್ರಫಿಯಲ್ಲಿ ನನ್ನ ಅಂತಿಮ ಪರೀಕ್ಷೆಗಾಗಿ ಗಮನ ಸೆಳೆಯುವ ಚಿತ್ರವನ್ನು ಸೆರೆಹಿಡಿಯಲು ಭಾರತಕ್ಕೆ ಬಂದೆ. ಗೋಕರ್ಣ, ಕುಡ್ಲೆ ನನ್ನನ್ನು ಸೆಳೆಯಿತು. ಇಲ್ಲಿ ಬಂದಾಗಲೆಲ್ಲ ಜನರು ಮತ್ತು ದೈನಂದಿನ ಜೀವನದ ದೃಶ್ಯಗಳನ್ನು ಸೆರೆಹಿಡಿದೆ. ಕುಡ್ಲೆಯಲ್ಲಿ ರೈತರೊಂದಿಗೆ ಮತ್ತು ಗೋಕರ್ಣದಲ್ಲಿ ಪೂಜಾರಿಗಳೊಂದಿಗೆ ಸ್ನೇಹ ಬೆಳೆಸಿದೆ. ಕ್ಷೌರಿಕರು, ವೈದ್ಯರು, ಶಿಕ್ಷಕರು ಸೇರಿದಂತೆ ಹೊಸ ಸ್ನೇಹಿತರನ್ನು ಕಂಡುಕೊಂಡೆ. ಈ ಪುಸ್ತಕದ ಪುಟಗಳು ಗೋಕರ್ಣದ ಬಗ್ಗೆ ನನ್ನ ಆಕರ್ಷಣೆ, ಕಡಲ ತಡಿಯ ಕ್ಷೇತ್ರ ಹೇಗೆ ಬದಲಾಗುತ್ತ ಹೋಯಿತು ಎಂಬುದನ್ನು ದರ್ಶಿಸುತ್ತದೆ. | ಹ್ಯಾರಿ ಪೆರೋನಿಯಸ್ ಲೇಖಕ, ಸ್ವೀಡನ್ ಪ್ರಜೆ