ಮಹಿಳೆ ಸರ್ವ ಕ್ಷೇತ್ರದಲ್ಲೂ ಸಶಕ್ತ

MAR8-HRP-1
Published on

ಹರಪನಹಳ್ಳಿ: ಮಹಿಳೆ ಸರ್ವ ಕ್ಷೇತ್ರದಲ್ಲೂ ಅಡಿ ಇಡುವ ಮೂಲಕ ತಾನು ಅಬಲೆಯಲ್ಲ ಸಬಲೆ ಎಂಬುದನು ಸಾಬೀತು ಪಡಿಸಿದ್ದಾಳೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ ಸೌಧದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಅನಾದಿ ಕಾಲದಿಂದಲೂ ಮಹಿಳೆ ಯಾವುದೇ ಹಕ್ಕುಗಳು ಇಲ್ಲದೆ ಕಷ್ಟದಿಂದ ಜೀವನ ನಿರ್ವಹಿಸಿದ್ದಾಳೆ. ಸ್ವಾತಂತ್ರ್ಯ ಪೂರ್ವದಲ್ಲಿ ಸತಿ ಸಹಗಮನ ಪದ್ಧತಿ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಬಹುಪತ್ನಿತ್ವದಂತಹ ಅನೇಕ ಅನಿಷ್ಠ ಪದ್ಧತಿಗೆ ಮಹಿಳೆ ಒಳಗಾಗಿದ್ದಳು. ಹಿಂದಿನ ಕಾಲದಲ್ಲೂ ಸ್ತ್ರೀಯರು ಸಮಾನ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಆದರೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಭಾರತ ಸಂವಿಧಾನ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಸ್ವಾತಂತ್ರ್ಯದ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಆದ್ದರಿಂದ ಸ್ತ್ರೀಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದರು. 17ನೇ ಶತಮಾನದಲ್ಲಿ ರಾಜರಾಮ ಮೋಹನ್‌ರಾಯರವರು ಸತಿ ಸಹಗಮನ ಪದ್ಧತಿ ವಿರುದ್ಧ ಹೋರಾಡಿದರು. ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅನೇಕ ಸಂಕಷ್ಟಗಳನ್ನು ಎದುರಿಸಿದರು. ಇಂತಹ ಮಹನೀಯರನ್ನು ಸ್ಮರಿಸುತ್ತಾ ಪ್ರಗತಿಯತ್ತ ಹೆಜ್ಜೆ ಇಡಬೇಕು ಎಂದರು.

ಮೊದಲ ಗೋಷ್ಠಿಯಲ್ಲಿ ಮಹಿಳಾ ವಿವಾಹ, ಜೀವನಾಂಶ, ವಿಚ್ಛೇದನ, ಆಸ್ತಿ ಹಕ್ಕುಗಳ ಬಗ್ಗೆ ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ ವಿಷಯ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ವಕೀಲ ಬಿ.ಗೋಣಿಬಸಪ್ಪ ವರದಕ್ಷಿಣೆ ನಿಷೇಧ, ಆಸಿಡ್ ದಾಳಿ, ಅಪಹರಣ, ಅತ್ಯಾಚಾರ, ಲೈಂಗಿಕ ಕಿರುಕುಳ, ಪೊಸ್ಕೋ ಕಾಯ್ದೆ ಕುರಿತು ವಿಷಯ ಮಂಡಿಸಿದರು. ಮೂರನೇ ಗೋಷ್ಠಿಯಲ್ಲಿ ವೈದ್ಯಕೀಯ ಕಾಯಿದೆ ಕುರಿತು ತಾಲೂಕು ವೈದ್ಯಾಧಿಕಾರಿ ಡಾ.ಹಾಲಸ್ವಾಮಿ ವಿಷಯ ಮಂಡಿಸಿದರು. ನಾಲ್ಕನೇ ಗೋಷ್ಠಿಯಲ್ಲಿ ವಕೀಲೆ ಜೆ. ಸೀಮಾ, ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಕುರಿತು ವಿಷಯ ಮಂಡಿಸಿದರು.

ಸಿವಿಲ್ ನ್ಯಾಯಾಧೀಶೆ ಫಕ್ಕೀರವ್ವ ಕೆಳಗೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿದರು. ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಕೆ.ವೀರೂಪಾಕ್ಷಪ್ಪ, ಸಿಡಿಪಿಒ ಸೂಪರವೈಸರ್ ರೇಣುಕಾದೇವಿ, ನವೀನಕುಮಾರ, ಪವಿತ್ರಾ, ಕಲೀಲ್, ಬಸವರಾಜ, ಸಿ.ರಾಜಪ್ಪ, ಮೃತ್ಯುಂಜಯ, ಮಂಜುಳಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net