

ಹರಪನಹಳ್ಳಿ: ಪಟ್ಟಣದ ಕೆಎಚ್‌ಬಿ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಮೂರು ಮನೆಗಳಲ್ಲಿ ಕಳ್ಳತನವಾಗಿದೆ.
ಉಪನ್ಯಾಸಕ ಬುಳ್ಳಪ್ಪ, ವೀರೇಶ ನಾಯಕ ಮತ್ತು ಸೈನಿಕ ಅಡಿವೆಪ್ಪ ಹೊಸ ಓಬಳಾಪುರ ಅವರ ಮನೆಗಳ ಬೀಗ ಮುರಿದ ಕಳ್ಳರು ಒಳಗೆ ನುಗ್ಗಿ ಕೈಚಳಕ ತೋರಿದ್ದಾರೆ. ಬುಳ್ಳಪ್ಪ ಅವರ ಮನೆಯಲ್ಲಿ 20 ತೊಲ ಚಿನ್ನಾಭರಣ, 15 ತೊಲ ಬೆಳ್ಳಿ, 8 ಸಾವಿರ ನಗದು ಕಳ್ಳತನವಾಗಿದೆ.
ವೀರೇಶ ನಾಯಕ ಕುಟುಂಬ ಊರಿಗೆ ಹೋಗಿದ್ದು ಮರಳಿದ ನಂತರ ಕಳ್ಳತನವಾದ ಮೌಲ್ಯದ ಬಗ್ಗೆ ಗೊತ್ತಾಗಲಿದೆ. ಅಡಿವೆಪ್ಪ ಅವರ ಮನೆಯಲ್ಲಿ ಅಲ್ಮೇರಾ, ಡ್ರಾಗಳನ್ನು ಕಿತ್ತು ಬಿಸಾಡಿದ್ದು, ಏನೂ ಸಿಕ್ಕಿಲ್ಲ.
ಸ್ಥಳಕ್ಕೆ ಹೊಸಪೇಟೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ದೌಡಾಯಿಸಿ ಪರಿಶೀಲಿಸಿತು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಶಂಭುಲಿಂಗ ಹಿರೇಮಠ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.