ತೊಗರಿಕಟ್ಟಿ ಗ್ರಾಪಂ ಎಲೆಕ್ಷನ್ ಮತ್ತೆ ಮುಂದೂಡಿಕೆ

Harapanahalli Togarikatti
ತೊಗರಿಕಟ್ಟಿ ಗ್ರಾಪಂ ಚುನಾವಣೆ ಮುಂದೂಡಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಜ್ಯೋತಿನಾಯ್ಕ, ಕೆ.ಆನಂದ, ವೈ.ಮಂಜುನಾಥ, ಭೋವಿ ಮಂಜುನಾಥ, ಸರಿತಾ, ಹನುಮಕ್ಕ, ರುಕ್ಮಿಣಿ ಇತರರಿದ್ದರು.
Published on

ಹರಪನಹಳ್ಳಿ: ತಾಲೂಕಿನ ತೊಗರಿಕಟ್ಟಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆ ಭಾರಿ ಹೈಡ್ರಾಮಾದಿಂದಾಗಿ ಎರಡನೇ ಬಾರಿಗೆ ಮುಂದೂಡಿಕೆಯಾಗಿದೆ. ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು.

ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಆ.2ರಂದು ದಿನಾಂಕ ನಿಗದಿಯಾಗಿತ್ತು. ಆಗ ಅಧ್ಯಕ್ಷೆ ಸ್ಥಾನಕ್ಕೆ ಸರಿತಾಬಾಯಿ ಹಾಗೂ ಕೆಂಚವ್ವ, ಉಪಾಧ್ಯಕ್ಷ ಸ್ಥಾನಕ್ಕೆ ಬಣಕಾರ ಹನುಮಕ್ಕ, ತಾವರಗುಂದಿ ಶ್ರೀಕಾಂತ ನಾಮಪತ್ರ ಸಲ್ಲಿಸಿದ್ದರು. ಆದರೆ, ಮತ ಎಣಿಕೆ ವೇಳೆ ಗೊಂದಲ ಉಂಟಾದ ಪರಿಣಾಮ ಚುನಾವಣಾಧಿಕಾರಿ ಪ್ರಸನ್ನ ಅವರು ಫಲಿತಾಂಶ ಘೋಷಿಸದೆ ಆ.7ಕ್ಕೆ ಚುನಾವಣೆ ನಡೆಸುವುದಾಗಿ ಎಲ್ಲ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಸೋಮವಾರ ಚುನಾವಣೆಗೆ ಸಿದ್ಧತೆ ನಡೆದಿತ್ತು. ಚುನಾವಣಾಧಿಕಾರಿಯೂ ಬಂದಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರು ಅನಾರೋಗ್ಯವೆಂದು ಹೇಳಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದರು. ಇದರಿಂದ ಕೆರಳಿದ ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗಿರೀಶಬಾಬು, ಚುನಾವಣಾಧಿಕಾರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದರಿಂದ ಚುನಾವಣೆ ನಡೆಸಲು ಬರಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಪ್ರತಿಭಟನೆಗೆ ಮುಂದಾದರು. ಪೊಲೀಸರ ಭದ್ರತೆಯಲ್ಲಿ ತಹಸೀಲ್ದಾರ್ ಅವರು ಹೊರಗೆ ಹೋಗುವಾಗ, ಚುನಾವಣೆ ನಡೆಸಲೇಬೇಕೆಂದು ಸದಸ್ಯರು ಪಟ್ಟು ಹಿಡಿದ ವೇಳೆ ಅಧಿಕಾರಿ ಜತೆ ವಾಗ್ವಾದ ನಡೆಯಿತು.

ಇತ್ತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾವಣಾ ಸಭಾಂಗಣದಿಂದ ಹೊರ ನಡೆದರು. ಬಳಿಕ ಬಿಜೆಪಿ ಬೆಂಬಲಿತ 11 ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಪಂ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಜಿಲ್ಲಾಧಿಕಾರಿಗಳು ಆಗಮಿಸುವವರೆಗೂ ಆಹೋರಾತ್ರಿ ಧರಣಿ ನಡೆಸಲು ಮುಂದಾದರು. ಸಿಪಿಐ ನಾಗರಾಜ ಎಂ ಕಮ್ಮಾರ, ಪಿಎಸ್‌ಐ ಎಸ್.ಸಿ.ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಮುಖರಾದ ಜ್ಯೋತಿನಾಯ್ಕ, ಕೆ.ಆನಂದ, ವೈ.ಮಂಜುನಾಥ, ಭೋವಿ ಮಂಜುನಾಥ, ಸರಿತಾ, ಹನುಮಕ್ಕ, ರುಕ್ಮಿಣಿ, ಗೋಣೆಪ್ಪ, ರತ್ನಮ್ಮ, ಮಾಲಾಶ್ರೀ, ನೇತ್ರಾವತಿ, ಲಕ್ಷ್ಮಮ್ಮ, ಮುಖಂಡರಾದ ಲಿಂಬ್ಯನಾಯ್ಕ, ಮಂಜ್ಯನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net