ದುರ್ಬಲರ ಬಲವಾಗಿದ್ದ ಧೀಮಂತ ನಾಯಕ

Harapanahalli Urs
ಹರಪನಹಳ್ಳಿಯಲ್ಲಿ ಮಾಜಿ ಸಿಎಂ ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು. ಎಸಿ ಟಿ.ವಿ.ಪ್ರಕಾಶ್, ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ., ವಿಸ್ತಿರ್ಣಾಧಿಕಾರಿ ಭೀಮಪ್ಪ ಕೊಳಚಿ, ಗ್ರೇಡ್ ತಹಸೀಲ್ದಾರ್ ನಟರಾಜ, ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ, ವಕೀಲ ಕಣಿವಿಹಳ್ಳಿ ಮಂಜುನಾಥ ಇತರರಿದ್ದರು.
Published on

ಹರಪನಹಳ್ಳಿ: ಶೋಷಿತ, ದುರ್ಬಲರ ಧ್ವನಿ ಮತ್ತು ಬಲವಾಗಿದ್ದರು ಮಾಜಿ ಸಿಎಂ ಡಿ.ದೇವರಾಜ ಅರಸು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅರಸು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯದ ನಂತರ ರಾಜತ್ವ ಹೋಗಿ, ಪ್ರಜಾಪ್ರಭುತ್ವ ಸ್ಥಾಪನೆ ಬಳಿಕ ದೇವರಾಜ ಅರಸು ಅವರು ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡಿದರು. ಉಳುವವನೆ ಭೂ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆ ಮೂಲಕ ಕರ್ನಾಟಕದ ಮನೆ ಮಾತಾದವರು. ಅಲ್ಲದೇ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಅವರ ಕನಸು ನನಸು ಮಾಡಲು ಯುವಜನತೆ ಮುಂದಾಗಬೇಕು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ವಿ.ಹತ್ತಿಕಾಳ ಮಾತನಾಡಿ, ದೇವರಾಜು ಅರಸು ಅವರು ಬಡ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಗಳನ್ನು ತೆರೆದರು. ವಿದ್ಯಾಸಿರಿ ನಾಡು ಎನ್ನುವ ಹೆಸರು ಪಡೆದಿರುವ ತಾಲೂಕಿಗೆ ವಸತಿ ಶಾಲೆಗಳಿದ್ದರೂ ಕೊರತೆಗಳು ಇವೆ. ಇನ್ನೆರಡು ವಸತಿ ಶಾಲೆಗಳ ಅಗತ್ಯವಿದೆ ಎಂದು ಶಾಸಕರ ಗಮನಕ್ಕೆ ತಂದರು.

ವಕೀಲ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ದೇಶಕ್ಕೆ ಡಾ.ಅಂಬೇಡ್ಕರ್ ಮಾದರಿಯಾಗಿದ್ದರೆ, ಕರ್ನಾಟಕದ ಅಂಬೇಡ್ಕರ್ ಎಂದರೆ ದೇವರಾಜ ಅರಸು. ಅವರು ಅನೇಕ ದೀನ, ದಲಿತ, ಬಡ ಜನರ ಆಶಾಕಿರಣವಾಗಿದ್ದು, ಮುಖ್ಯಮಂತ್ರಿಗಳಾಗಿ ಸಮಾಜದ ಸುಧಾರಣೆಗೆ ಶ್ರಮಿಸಿದರು ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಗೊಂದಲಿಗರ ಗೋಪಾಲ, ವೇಷಗಾರ ಅಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net