ಸಿದ್ದರಾಮೋತ್ಸವಕ್ಕೆ 5 ಲಕ್ಷಕ್ಕೂ ಅಧಿಕ ಜನ; ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾಹಿತಿ

PT Parameshwara Naik
Published on

ಪಕ್ಷದ ರಾಷ್ಟ್ರೀಯ ನಾಯಕರು ಭಾಗಿ

ಹರಪನಹಳ್ಳಿ: ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ಜನ್ಮದಿನಾಚರಣೆ ನಿಮಿತ್ತ ದಾವಣಗೆರೆಯಲ್ಲಿ ಆ.3ರಂದು ಹಮ್ಮಿಕೊಂಡಿರುವ ಅಮೃತ ಮಹೋತ್ಸವಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಒಟ್ಟು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತಿತರ ಗಣ್ಯರು, ಜನಪ್ರತಿನಿಧಿಗಳು, ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಭಾನವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಪರಿಣಾಮ ಸಾಮಾನ್ಯ ಜನರ ಜೀವನ ಅಧೋಗತಿಗೆ ಇಳಿಯುತ್ತಿದೆ. ಇದರಿಂದ ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ನಿಷಕ್ರೆಿಯವಾಗಿದೆ. ರಾಜ್ಯದಲ್ಲಿ ಸರ್ಕಾರ ನಿಯಂತ್ರಣದಲ್ಲಿ ಇಲ್ಲದಂತಾಗಿದ್ದು, ಕೊಲೆಗಳು ನಡೆಯುತ್ತಿದ್ದರೂ ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಭ್ರಷ್ಟಾಚಾರ ಮಿತಿಮೀರುತ್ತಿದೆ. ಈ ಬಗ್ಗೆ ಕೇಂದ್ರಕ್ಕೆ ಗುತ್ತಿಗೆದಾರರು ಮನವಿ ನೀಡಿದರೂ ಸರ್ಕಾರ ಮೌನವಹಿಸಿವೆ ಎಂದು ಆರೋಪಿಸಿದರು.

ಪ್ರಮುಖರಾದ ಚಿರಸ್ಥಹಳ್ಳಿ ಮರಿಯಪ್ಪ, ಮುತ್ತಿಗಿ ಜಂಬಣ್ಣ, ಎ.ಮೂಸಾಸಾಬ್, ಪ್ರವೀಣ್, ಜಿ.ನಾಗರಾಜ, ತಿಮ್ಮನಾಯ್ಕ, ಜಾವೀದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net