

ಹರಪನಹಳ್ಳಿ : ಗ್ರಾಮೀಣ ಪ್ರದೇಶದಲ್ಲಿ ರುದ್ರಭೂಮಿಗಳ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ಎನ್.ಮೊಹಮ್ಮದ್ ಅಲಿ ಅಕ್ರಮ್ ಶಾ ಸೂಚನೆ ನೀಡಿದರು.
ಇಲ್ಲಿನ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತ ನಾಡಿದರು. ಹರಪನಹಳ್ಳಿ ತಾಲೂಕಿನ ಯಾವ ಗ್ರಾಮಗಳಲ್ಲಿ ಸ್ಮಶಾನಗಳ ಅಭಿವೃದ್ಧಿ ಆಗಿಲ್ಲವೋ ನರೇಗಾದಡಿ ಕಾಮಗಾರಿ ಕೈಗತ್ತಿಕೊಳ್ಳಬೇಕು. ಒಂದು ವೇಳೆ ಜಾಗದ ತಕರಾರುಗಳಿದ್ದರೆ ಹದ್ದುಬಸ್ತು ಮಾಡಲು ಎಡಿಎಲ್‌ಆರ್ ಅವರ ಗಮನಕ್ಕೆ ತಂದು ಸ್ಮಶಾನಗಳ ಅಭಿವೃದ್ಧಿಪಡಿಸಬೇಕು. ಈ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ತಾಕೀತು ಮಾಡಿದರು.
ಹರಪನಹಳ್ಳಿ ತಾಲೂಕು ಇದೀಗ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಿದೆ. ಹೀಗಾಗಿ ಆಡಳಿತಾತ್ಮಕವಾಗಿ ಸಾಕಷ್ಟು ಸಮಸ್ಯೆಗಳು ಇದ್ದರೂ ಅದನ್ನು ಮೀರಿ ವಿವಿಧ ಇಲಾಖೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅತಿ ದೊಡ್ಡ ತಾಲೂಕಾದ ಕಾರಣ ಹೆಚ್ಚಿನ ಒತ್ತು ನೀಡಲಾಗುವುದು. ಏನೇ ಸಮಸ್ಯೆಗಳಿದ್ದರೂ ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿಲ್ಲ. ನನಗೆ ಫೋನ್ ಮಾಡಿ ತಿಳಿಸಿದರೆ ಸಾಕು ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಮಾತನಾಡಿ, ಗ್ರಂಥಾಲಯ ಕರವನ್ನು ಕೆಲ ಗ್ರಾಪಂಗಳು ಜಿಪಂ ಗ್ರಂಥಾಲಯ ಖಾತೆಗೆ ಜಮೆ ಮಾಡಿಲ್ಲ. ಅದಷ್ಟು ಬೇಗ ಪಾವತಿ ಮಾಡಬೇಕು. ಇ-ಸ್ವತುಗಳನ್ನು ಅಭಿಯಾನದ ರೂಪದಲ್ಲಿ ತ್ವರಿತವಾಗಿ ವಿತರಿಸಬೇಕು. ವಸತಿ ಯೋಜನೆಯ ಫಲಾನುಭವಿಗಳು ಮನೆ ನಿರ್ಮಾಣ ಕಾಮಗಾರಿ ಆರಂಭಿಸದಿದ್ದರೆ ನೋಟಿಸ್ ನೀಡಿ ತಿಳಿಸಬೇಕು ಎಂದು ತಿಳಿಸಿದರು.
ತಾಲೂಕು ಯೋಜನಾ ಅಧಿಕಾರಿ ನವೀನ್‌ಕುಮಾರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕಿರಣ್ ನಾಯ್ಕ, ಪಿಆರ್‌ಇಡಿ ಎಇಇ ಕುಬೇಂದ್ರನಾಯ್ಕ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.