

ಹರಪನಹಳ್ಳಿ: ಕಳ್ಳತನ ತಡೆಗೆ ಜನರ ಸಹಕಾರ ಅಗತ್ಯ. ಮನೆ ಮುಂದಿನ ವಿದ್ಯುತ್ ದೀಪಗಳನ್ನು ಆರದಂತೆ ನೋಡಿಕೊಳ್ಳಿ ಎಂದು ಪಿಎಸ್‌ಐ ಶಂಭುಲಿಂಗ ಎಸ್. ಹಿರೇಮಠ ಹೇಳಿದರು.
ಪಟ್ಟಣದ ಕೊಟ್ಟೂರು ರಸ್ತೆಯ ಕೆಎಚ್‌ಬಿ ಬಡಾವಣೆಯಲ್ಲಿ ಸರಣಿ ಮನೆ ಕಳ್ಳತನವಾದ ಕಾರಣ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಗಳಿಗೆ ಸಿಸಿ ಟಿವಿ ಅಳವಡಿಸಿಕೊಳ್ಳಬೇಕು. ಬೇರೆಡೆ ಹೋಗಬೇಕಾದರೆ ಠಾಣೆಗೆ ತಿಳಿಸಬೇಕು. ಮನೆ ಡೋರ್‌ಗಳಿಗೆ ಇಂಟರ್ ಲಾಕ್ ಅಳವಡಿಸಿಕೊಳ್ಳಬೇಕು ಎಂದರು. ಮನೆಯಲ್ಲಿ ಯಾರೂ ಇಲ್ಲದಾಗ ಹೊರಗಿನ ವಿದ್ಯುತ್ ದೀಪ ಹಾಕುವುದನ್ನು ಮರೆಯಬೇಡಿ. ಮನೆಯ ಸುತ್ತ ಬೆಳೆದಿರುವ ಗಿಡಗಂಟಿ ಕತ್ತರಿಸಿ. ನಗದು ಮತ್ತು ಆಭರಣಗಳನ್ನು ಬ್ಯಾಂಕ್ ಖಾತೆಗಳಲ್ಲಿ ಇರಿಸುವುದು ಸೂಕ್ತ. ಬಡಾವಣೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಕಂಡರೆ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಿ.
ವಾಹನಗಳನ್ನು ಪಾರ್ಕಿಂಗ್ ಜಾಗದಲ್ಲಿ ಬಿಡಿ. ಕಾರ್‌ಗಳಿಗೆ ಸೆಂಟರ್ ಲಾಕ್ ಸಿಸ್ಟಂ ಅಳವಡಿಸಿ.ಅನುಮಾನಸ್ಪಾದ ವಾಹನಗಳು ಬಡಾವಣೆಯಲ್ಲಿ ಪದೇಪದೆ ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದರು. ಸಂಚಾರ ಠಾಣೆ ಪಿಎಸ್‌ಐ ರುದ್ರಪ್ಪ, ಎಎಸ್‌ಐ ನಿಂಗಪ್ಪ, ಗುರುರಾಜ್, ಪೊಲೀಸ್ ಸಿಬ್ಬಂದಿ ಇದ್ದರು.