

ಹರಪನಹಳ್ಳಿ: ದಸಾರ ಉತ್ಸವ ಹುಟ್ಟಿಕೊಂಡಿದ್ದು ಹಂಪಿಯಲ್ಲಿ. ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವವನ್ನೂ ಸರ್ಕಾರಿ ಅದ್ದೂರಿಯಾಗಿ ಆಚರಿಸಬೇಕು ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಆಶಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಎಲ್ಲ ರಂಗಗಳಲ್ಲೂ ಅವರು ಮುಂದೆ ಬರಲು ಸಾಧ್ಯ.ಇಂದು ಎಲ್ಲ ರಂಗಗಳಲ್ಲೂ ತೃತೀಯ ಲಿಂಗಿಗಳು ಮುಂದೆ ಬರುತ್ತಿದ್ದಾರೆ. ತೃತೀಯ ಲಿಂಗಿಗಳ ರಾಜ್ಯಮಟ್ಟದ ಉತ್ಸವ ಮಾಡುವ ಆಸೆ ಇತ್ತು. ಇದರ ಜತೆಗೆ ಅಖಿಲ ಭಾರತ ಮಹಿಳೆಯರ ಸಮ್ಮೇಳನ ಆಯೋಜಿಸಲು ಹಿಂದಿನ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೆ. ಕರೋನಾದಿಂದಾಗಿ ಅನುದಾನ ಕೊರತೆಯಾಯಿತು. ಹೀಗಾಗಿ ಅಂದುಕೊಂಡಷ್ಟು ಕೆಲಸವಾಗಲಿಲ್ಲ. ಜಾನಪದ ಕಲಾವಿದರಿಗೆ ಹೆಚ್ಚು ಅನುದಾನಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಜಾನಪದ ಅಕಾಡೆಮಿ ಅಧ್ಯಕ್ಷೆ ಆದ ಮೇಲೆ ಕೆಲವು ಬದಲಾವಣೆ ಮಾಡಿರುವೆ. ನಾನು ಅಂದುಕೊಂಡ ಹಾಗೆ ಕಲಾವಿದರಿಗೆ ಡಿಜಿಟಲ್ ಆತ್ಮಕತೆ ಆಗಬೇಕಾಗಿತ್ತು. ಹಿಂದಿನವರು ಪ್ರಯತ್ನ ಮಾಡಿದರೂ ಆಗಲಿಲ್ಲ. ನಾನೂ ಪ್ರಯತ್ನ ಮಾಡಿದೆ. ಆದರೆ, ಕರೋನಾ ಅಡ್ಡಿಯಾಯಿತು. ಸಮಿತಿಗಳನ್ನು ರಚಿಸಿ, ಸಭೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ನಂತರ ನನ್ನ ಅವಧಿ ಮುಗಿಯಿತು ಎಂದರು.
ನಾನು ಎಮ್ಮೆಲ್ಸಿ ಆಗುವ ವಿಚಾರ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ಯಾವುದೇ ರಾಜಕೀಯ ಪಕ್ಷ ನನನ್ನು ಕರೆದಿಲ್ಲ. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಕಲಾವಿದರು ನಿಂಬೆಹಣ್ಣು ಇದ್ದಹಾಗೆ. ಒಬ್ಬರಿಂದ ಇನ್ನೊಬ್ಬರಿಗೆ ಹೋಗಬೇಕಾಗುತ್ತದೆ. ಕಲಾವಿದರು ರಾಜಕೀಯಕ್ಕೆ ಬರುವುದು ಅಷ್ಟು ಸೂಕ್ತ ಅಲ್ಲ, ರಾಜಕೀಯಕ್ಕೆ ಬರುವ ಬಗ್ಗೆ ಅವಕಾಶ ಸಿಕ್ಕರೆ ನೋಡೋಣ.| ಮಾತಾ ಮಂಜಮ್ಮ ಜೋಗತಿ ಪದ್ಮಶ್ರೀ ಪುರಸ್ಕೃತ ತೃತೀಯ ಲಿಂಗಿ