

ಹರಪನಹಳ್ಳಿ: ತಾಲೂಕಿನ ಮಾಡ್ಲಿಗೇರಿ ಗ್ರಾಪಂ ವ್ಯಾಪ್ತಿಯ ಕಾನಹಳ್ಳಿ, ವಡ್ಡಿನದಾದಾಪುರ, ವಿ.ದಾದಾಪುರ ತಾಂಡಾ, ಮಾಡ್ಲಿಗೇರಿ, ಮಾಡ್ಲಿಗೇರಿ ತಾಂಡಾ, ಕರೇಕಾನಹಳ್ಳಿ, ಕರೇಕಾನಹಳ್ಳಿ ತಾಂಡಾ ಸೇರಿ ವಿವಿಧೆಡೆ ‘ಶಾಸಕರ ನಡೆ, ಗ್ರಾಮದ ಕಡೆ’ ಕಾರ್ಯಕ್ರಮ ನಡೆಯಿತು.
ಜೆಜೆಎಂ ಯೋಜನೆಗೆ ಭೂಮಿ ಪೂಜೆ ನೇರವೇರಿಸಿದ ಜಿ.ಕರುಣಾಕರರೆಡ್ಡಿ ನಂತರ ಜನರ ಸಮಸ್ಯೆಗಳನ್ನು ಅಲಿಸಿದರು. ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ನಮ್ಮೂರಿನ ಕೆರೆಯನ್ನು ಕೈಬಿಡಲಾಗಿದೆ ಎಂದು ಕಾನಹಳ್ಳಿ ಗ್ರಾಮಸ್ಥರು ದೂರಿದರು. ಯೋಜನೆ ಎಇಇಗೆ ಕರೆ ಮಾಡಿದ ಶಾಸಕರು, ಮಾಹಿತಿ ಪಡೆದು, ಕ್ರಮ ಕೈಗೊಳ್ಳುವ ಭರವಸೆ ಹೇಳಿದರು.
ಜಮೀನಿಗೆ ಹೋಗಲು ರಸ್ತೆ ಇಲ್ಲ ಎಂದು ವಡ್ಡಿನದಾದಾಪುರ ತಾಂಡಾದ ರೈತರು ಅಳಲು ತೋಡಿಕೊಂಡರು. ‘ನಮ್ಮ ಹೊಲ-ನಮ್ಮ ದಾರಿ’ ಯೋಜನೆಯಡಿ ಸೇರಿಸಲು ಸ್ಥಳದಲ್ಲಿದ್ದ ಇಒ ಮತ್ತು ಪಿಡಿಒಗೆ ಸೂಚನೆ ನೀಡಿ, ಜಿಪಂನ ಸಿಇಒ ಜತೆ ಮಾತನಾಡುವುದುದಾಗಿ ತಿಳಿಸಿದರು.
ಶಾಲಾ ಕೊಠಡಿ ಅಪೂರ್ಣವಾಗಿದೆ. ಕಾಯಂ ಶಿಕ್ಷಕರಿಲ್ಲ, ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಮಾಡ್ಲಿಗೇರಿ ಗ್ರಾಮಸ್ಥರು ದೂರಿದರು. ಮಾಡ್ಲಿಗೇರಿ ತಾಂಡಾ ಬಿಜೆಪಿ ಕಾರ್ಯಕರ್ತನೊಬ್ಬ ಮಾತನಾಡಿ, ವಸತಿ ಸೌಲಭ್ಯ ಕಲ್ಪಿಸಲು ಗ್ರಾಪಂ ಸದಸ್ಯರೊಬ್ಬರು 30 ಸಾವಿರ ರೂ. ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆತನನ್ನು ಸಮಾಧಾನಪಡಿಸಿದ ಶಾಸಕರು, ಮನೆ ಮಂಜೂರು ಮಾಡುವ ಭರವಸೆ ನೀಡಿದರು. ಕರೇ ಕಾನಹಳ್ಳಿ ಗ್ರಾಮಸ್ಥರು ಮಾತನಾಡಿ, ನಮ್ಮೂರಿಗೆ ಕೆರೆ ಅಗತ್ಯವಿದೆ ಎಂದರು. ಪರಿಹಾರ ಒದಗಿಸುವುದಾಗಿ ಶಾಸಕರು ಹೇಳಿದರು.
ಗ್ರಾಮದಿಂದ ಮುಖ್ಯ ರಸ್ತೆವರೆಗೆ ರಸ್ತೆ ಅಗತ್ಯವಿದೆ ಆದರೆ, ವಲಯ ಅರಣ್ಯ ಇಲಾಖೆಗೆ ಬರುವುದರಿಂದ ಸ್ಥಳದಲ್ಲಿದ್ದ ಅರಣ್ಯಾಧಿಕಾರಿ ಮಲ್ಲಪ್ಪ ನವರ ಬಳಿ ಚರ್ಚಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ರಸ್ತೆಗೆ ಅವಕಾಶ ಮಾಡಿಕೊಡಲು ಪ್ರಯತ್ನಿಸುವೆ ಎಂದು ಶಾಸಕರಿಗೆ ತಿಳಿಸಿದರು. ಪ್ರಮುಖರಾದ ವಿಷ್ಣುವರ್ದನ ರೆಡ್ಡಿ, ಆರ್.ಲೋಕೇಶ್, ಕಣಿವಿಹಳ್ಳಿ ಮಂಜುನಾಥ, ಎಂ.ಮಲ್ಲೇಶ್, ಹೇಮಂತಕುಮಾರ, ಭಂಗಿ ಚಂದ್ರಪ್ಪ, ಕೆ.ಪ್ರಕಾಶ್, ಟಿ.ನಾಗರಾಜ, ಡಿ.ಕೆ.ಪ್ರಕಾಶ್, ಯೋಗೆಶ್, ಶಿವಾನಂದ, ಪಿಡಿಒ ಆನಂದನಾಯ್ಕ, ಡಿ.ಪ್ರಕಾಶ್, ರಾಮಕೃಷ್ಣ, ವಿರೇಶ ಶೆಟ್ಟಿ ಇತರರು ಇದ್ದರು.