

ಹರಪನಹಳ್ಳಿ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಎಸ್‌ಯುಜೆಎಂ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಎಸ್‌ಯುಜೆಎಂ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಮತ್ತಿತರ ಪದಗಳನ್ನು ಪಡೆಯುವ ಮೂಲಕ ಮುಂಚೂಣಿ ರಾಷ್ಟ್ರಗಳ ಪಟ್ಟಿಗೆ ದೇಶವನ್ನು ಕೊಂಡೊಯ್ಯುತ್ತಿದ್ದಾರೆ. ಈ ಸಾಧನೆ ನಿರಂತರ ಸಾಗಲು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕ್ರೀಡಾಳುಗಳು ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ತೀರ್ಪುಗಾರರು ಎಲ್ಲ ಆಟಗಾರರನ್ನು ಒಂದೇ ದೃಷ್ಟಿಯಿಂದ ನೋಡಬೇಕು ಹಾಗೂ ನ್ಯಾಯುತವಾದ ತೀರ್ಪು ನೀಡಬೇಕು. ದೈಹಿಕ ಶಿಕ್ಷಕರು ಸೂಕ್ತ ತರಬೇತಿ ನೀಡಿ ತಾಲೂಕಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಪ್ರೋತ್ಸಾಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಎಚ್.ಎಂ. ಅಶೋಕ, ಕ್ರೀಡಾ ಸ್ಪರ್ಧಿಗಳಿಂದ ಧ್ವ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಯೋಗವೂ ಆರೋಗ್ಯಕರ ಕ್ರೀಡೆಯಾಗಿದ್ದು, ಇದರಲ್ಲಿ ಎಲ್ಲರೂ ತೊಡಗಿಕೊಂಡು ಸಾಧನೆ ಮಾಡಬೇಕು ಎಂದರು.
ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಕ್ರೀಡಾ ಜ್ಯೋತಿ ಬೆಳಗಿಸಿದರು. ತಾಲೂಕಿನ ಚಿಗಟೇರಿ, ಹಲುವಾಗಲು, ಹರಪನಹಳ್ಳಿ, ಅರಸೀಕೆರೆ, ಮಾದಿಹಳ್ಳಿ, ಸಾಸ್ವಿಹಳ್ಳಿ, ಸಿಂಗ್ರಿಹಳ್ಳಿ, ಕಂಚಿಕೇರಿ, ಉಚ್ಚಂಗಿದುರ್ಗ, ಲಕ್ಷ್ಮೀಪುರ ಸೇರಿ 17 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದ್ದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜನರ್ದನರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಚನ್ನಬಸಪ್ಪ, ಪ್ರಾಚಾರ್ಯರರಾದ ಸಿ.ಬಿ.ವೆಂಕಟೇಶ್, ರಾಮಚಂದ್ರಪ್ಪ, ತೊಪ್ಪಲ ಹಾಲೇಶ್, ಆರ್.ಎಚ್. ಕಲ್ಯಾಣದವರ್, ಕೆ.ವಿ.ಅರುಣಕುಮಾರ, ಬಿ.ಬಸವರಾಜ ಇತರರಿದ್ದರು.