ಕೂಲಹಳ್ಳಿಯ ಶ್ರೀ ಗೋಣಿಬಸವೇಶ್ವರ ರಥೋತ್ಸವ ಅದ್ದೂರಿ

MAR2-HRP-2b
Published on

ಹರಪನಹಳ್ಳಿ: ಪಂಚಗಣಾಧೀಶರ ಇತಿಹಾಸ ಉಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೇರವೇರಿತು.

ರಥವನ್ನು ವಿವಿಧ ವಸ್ತ್ರ, ಹೂವುಗಳು, ದೇವಾನುದೇವತೆಗಳ ಭಾವಚಿತ್ರ, ಬಾಳೆದಿಂಡು, ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳು ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ನಡೆಸಲಾಯಿತು. ರಥಕ್ಕೆ 5 ಪ್ರದಕ್ಷಿಣೆ ಹಾಕಿ, ನಂತರ ಗೋಣಿಬಸವೇಶ್ವರರ ಪಟ(ಧ್ವಜ)ವನ್ನು ಬಹಿರಂಗ ಹರಾಜು ಮಾಡಲಾಯಿತು. ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಜಯಘೋಷಗಳ ನಡುವೆ ರಥೋತ್ಸವ ನಡೆಯಿತು.

ಹರಕೆ ಹೊತ್ತಿದ್ದ ಭಕ್ತರು ರಥಕ್ಕೆ ತೆಂಗಿನಕಾಯಿ, ಬಾಳೇಹಣ್ಣು ತೂರಿ ಹರಕೆ ತೀರಿಸಿದರು. ಚಿತ್ರದುರ್ಗ ದಾವಣಗೆರೆ, ಬಳ್ಳಾರಿ, ಗದಗ, ಹಾಗೂ ಹಾವೇರಿ ಸೇರಿ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಶ್ರೀ ಗೋಣಿಬಸವೇಶ್ವರರ ರಥೋತ್ಸವದ ದಿನಕ್ಕೆ ಸುತ್ತಲಿನ ಎತ್ತಿನ ಬಂಡಿ, ಟ್ರಾೃಕ್ಟರ್, ಕಾರು, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದರೆ, ನೂರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net