

ಹರಪನಹಳ್ಳಿ: ನಕಲು ಹೆಚ್ಚುತ್ತಿರುವ ಕಾರಣ ಸೇವಾ ಕೇಂದ್ರಗಳಲ್ಲಿ ಗುರುತಿನ ಚೀಟಿ ನೋಂದಣಿಗಿರುವ ಅವಕಾಶ ರದ್ದುಪಡಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಕಾರ್ಮಿಕ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು.
ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಸಹಾಯ ಧನವನ್ನು ಫಲಾನುಭವಿ ಖಾತೆಗೆ ಜಮಾ ಮಾಡಬೇಕು. ಫಲಾನುಭವಿ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯಗೊಳಿಸಿರುವ ಆದೇಶ ಹಿಂಪಡೆಯಬೇಕು. ಕಾರ್ಮಿಕರ ನೋಂದಣಿಯಲ್ಲಿ ಬೋಗಸ್ ಕಾರ್ಡ ನಿಯಂತ್ರಿಸಬೇಕು. ಉದ್ಯೋಗ ಪ್ರಮಾಣ ಪತ್ರಗಳನ್ನು ಪರಿಗಣಿಸಿ ನೋಂದಣಿ ಮಾಡಬೇಕು.
ಆರೋಗ್ಯ ಸಂಜೀವಿನಿ ನಗದು ರಹಿತ ಸೇವೆ ಜಾರಿಗೊಳಿಸಬೇಕು. ಕಾರ್ಮಿಕ ಇಲಾಖೆಗೆ ಪ್ರತ್ಯೇಕ ಹೊಸ ಸಾಪ್ಟ್‌ವೇರ್ ಅಳವಡಿಸಬೇಕು. ಜೀವಿತಾವಧಿ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ಬದಲು ಕಾರ್ಮಿಕ ಇಲಾಖೆಯೇ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಮಂಡಳಿಯಿಂದ ನೀಡುವ ಪಿಂಚಣಿ ಜತೆಗೆ ಕಂದಾಯ ಇಲಾಖೆ ನೀಡುವ ವೃದ್ಯಾಪ್ಯ ವೇತನವನ್ನೂ ಪಡೆಯಲು ಅವಕಾಶ ಕಲ್ಪಿಸಬೇಕು. ಕುಟುಂಬ ಪಿಂಚಣಿ ಸೌಲಭ್ಯ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಪ್ಟ್ ವೇರ್ ಅಪ್‌ಡೇಟ್ ಮಾಡಬೇಕು ಮತ್ತು ಹೆಚ್ಚಿಸಲಾದ 2 ಸಾವಿರ ರೂ. ಕೂಡಲೇ ಬಿಡುಗಡೆ ಮಾಡಬೇಕು.
ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ಕಾರ್ಮಿಕರ ಗುರುತಿನ ಚೀಟಿಯಲ್ಲಿರುವಂತೆ ವಯಸ್ಸಿಗೆ ಸಂಬಂಧಿಸಿದ ನಿಖರ ದಾಖಲೆ ಇಲ್ಲದಿರುವ ಕಾರಣ ಅರ್ಜಿ ತಿರಸ್ಕೃತವಾಗುವುದನ್ನು ಬಗೆಹರಿಸಬೇಕು. ಪಿಂಚಣಿ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ಪಿಂಚಣಿ ಅರ್ಜಿಯಲ್ಲಿರುವ ಹೆಸರು, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಹೊಂದಾಣಿಕೆ ಇಲ್ಲದ ಕಾರಣ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ಇದನ್ನು ಬಗೆಹರಿಸಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ತರಬೇಕು. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕ ಸಂಘಟನೆಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಟ್ಟಡ ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಪದಾಧಿಕಾರಿಗಳಾದ ಹುಲಿಕಟ್ಟಿ ರಹಮತ್, ಶಬ್ಬೀರ್, ಸೈಫುಲ್ಲಾ, ಕಾನಹಳ್ಳಿ ಮೆಹಬೂಬ್, ಜಮೀರ್ ಇತರರಿದ್ದರು.