ಹಂಪಿ ಉತ್ಸವದ ರೂವಾರಿ ಎಂ.ಪಿ.ಪ್ರಕಾಶ್; ತೆಗ್ಗಿನಮಠ ಶ್ರೀ ವರಸದ್ಯೋಜಾತ ಶಿವಾಚಾರ್ಯ ಹೇಳಿಕೆ

11072022 Harapanahalli MP Prakash
Published on


ಹರಪನಹಳ್ಳಿ: ಅಪರೂಪದ ಅನನ್ಯ ವ್ಯಕ್ತಿತ್ವದ ಸೃಜನಶೀಲ ಚಿಂತಕ, ಸಾಂಸ್ಕೃತಿಕ ರಾಯಬಾರಿ, ರಂಗಕರ್ಮಿ, ನಟ, ಹಂಪಿ ಉತ್ಸವದ ರೂವಾರಿ, ನಾಡಿನ ಮಾಜಿ ಉಪಮುಖ್ಯಮಂತ್ರಿಯಾಗಿ ವಿಭಿನ್ನ ವಿಚಾರಗಳ ಮೂಲಕ ನಾಡನ್ನು ಕಟ್ಟಿದ ಧೀಮಂತ ವ್ಯಕ್ತಿ ದಿ.ಎಂ.ಪಿ.ಪ್ರಕಾಶ್ ಆಗಿದ್ದರು ಎಂದು ತೆಗ್ಗಿನಮಠ ಶ್ರೀ ವರಸದ್ಯೋಜಾತ ಶಿವಾಚಾರ್ಯ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಸೋಮವಾರ ಎಂ.ಪಿ.ರವೀಂದ್ರ ಪ್ರತಿಷ್ಠಾನ ಸಹಯೋಗದೊಂದಿಗೆ ಎಂ.ಪಿ.ಪ್ರಕಾಶ್ 82 ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಎಂ.ಪಿ.ಪ್ರಕಾಶ್‌ರವರ ವಿಚಾರಗಳನ್ನು ಅವರ ಮಗನಾದ ದಿ.ಎಂ.ಪಿ.ರವೀಂದ್ರ ಮುಂದುವರೆಸಿಕೊಂಡು ಹೋಗಿದ್ದಾರೆ. ತಾಲೂಕಿನ 371ಜೆ ಕಲಂ, 60ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಸಾಕಷ್ಟು ಶ್ರಮವಹಿಸಿದ್ದಾರೆ ಅವುಗಳನ್ನು ಪೂರ್ಣಗೊಳಿಸಲಿ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ 371ಜೆ ಹೋರಾಟ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಜಾಕ್ ಉಸ್ತಾದ್ ಮಾತನಾಡಿ, ಜೀವನದ ದಿಕ್ಕನ್ನು ಬದಲಾವಣೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಕಠಿಣ ಶ್ರಮದಿಂದ ಮಾತ್ರ ಉನ್ನತ ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಾತನಾಡಿ, ನಮ್ಮ ತಂದೆ ಹಾಗೂ ಸಹೋದರರವರ ಅನೇಕ ಜನಪರ ಕೆಲಸಗಳನ್ನು ಮಾಡಿದ್ದು, ಅವರನ್ನು ಈ ಕ್ಷೇತ್ರದ ಜನತೆ ಸ್ಮರಿಸುತ್ತಾರೆ. ಅವರ ಹಾದಿಯಲ್ಲಿಯೇ ನಾವು ಕೆಲಸ ಮಾಡಲು ಮುಂದಾಗುತ್ತೇವೆ. ತಾವೆಲ್ಲರೂ ಸಹಕಾರ ನೀಡಿ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ 220 ವಿದ್ಯಾರ್ಥಿಗಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಹೆಚ್ಚು ನೋಂದಣಿ ಮಾಡಿದ 180 ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಸ್ವಿಹಳ್ಳಿ ನಾಗರಾಜ, ಶಿವರಾಜ, ನಿಟ್ಟೂರು ಹನುಮಂತ, ಪ್ರಸಾದ ಕವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net