

ಹರಪನಹಳ್ಳಿ: ಶಿಕ್ಷಣ ಇಲ್ಲದೆ ಸಂಸ್ಕಾರ ಬೆಳೆಯದು. ನಮ್ಮ ಬದುಕು ರೂಪಿಸುವುದು ಶಿಕ್ಷಕರು. ಹಾಗಾಗಿ ಅವರಿಗೆ ಗೌರವ ನೀಡೋಣ ಎಂದು ಪಟ್ಟಣದ ತರಳಬಾಳು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಲಹಾ ಸಂಸ್ಥೆಯ ಕಾರ್ಯದರ್ಶಿ ಕುಸುಮಾ ಜಗದೀಶ ಹೇಳಿದರು.
ಇದನ್ನೂ ಓದಿ: ಉತ್ತಮ ಶಿಕ್ಷಕರಿಂದ ದೇಶ ಅಭಿವೃದ್ಧಿ
ಪಟ್ಟಣದ ತರಳಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಮಾತನಾಡಿದರು. ಉತ್ತಮ ಶಿಕ್ಷಕರಿದ್ದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.
ಪ್ರತಿಯೊಂದು ಕ್ಷೇತ್ರದಲ್ಲಿ ಛಾಪು ಮೂಡಿಸುವಂತೆ ಮಾಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರು ಅಧ್ಯಯನಶೀಲರಾಗಬೇಕು. ಮಕ್ಕಳ ಮನಸ್ಸನ್ನು ಸೆಳೆಯುವ ಕೆಲಸ ಆಗಬೇಕು. ಮಕ್ಕಳಿಗೆ ಪ್ರೇರಣೆಯಾಗುವಂತೆ ಕರ್ತವ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ವಾಮದೇವ ಪಾಟಿಲ್ ಮಾತನಾಡಿ, ಜಗತ್ತಿನಲ್ಲಿ ವೈದ್ಯರು, ಇಂಜಿನಿಯರ್‌ಗಳಿಗೆ ಕೊರತೆ ಇಲ್ಲ. ಆದರೆ ಶಿಕ್ಷಕರಿಗೆ ಕೊರತೆ ಇದೆ.
ವಿದ್ಯಾರ್ಥಿಗಳು ತಂದೆ, ತಾಯಿಯವರ ಕನಸು ಈಡೇರಿಸಲು ಹಾಗೂ ಉತ್ತಮ ವ್ಯಕ್ತಿಯಾಗಲು ಗುರುಗಳು ಕಾರಣ. ಅವರನ್ನೂ ಯಾವತ್ತೂ ಮರೆಯಬಾರದು ಎಂದರು. ಉತ್ತಮ ಶಿಕ್ಷಕರಾದ ಬಾಗಳಿಯ ಲೋಕೇಶ, ಅರಸೀಕೆರೆಯ ವೀರೇಶ್, ಮುಮ್ತಾಜ್ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ನಂಜಪ್ಪ, ಶಿಕ್ಷಕರಾದ ಕುಮಾರಸ್ವಾಮಿ, ರಾಜಪ್ಪ, ಮಂಜುನಾಥ, ಮಹಾಂತೇಶ್, ಕರೀಂ, ಶಶಿಕಲಾ, ಬಷೀರ್ ಇತರರಿದ್ದರು.