

ಹರಪನಹಳ್ಳಿ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಸ್ಥಳೀಯ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಡಾ.ನಂಜುಡಪ್ಪ ವರದಿ ಪ್ರಕಾರ ಹರಪನಹಳ್ಳಿ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದ್ದು, 232 ಗ್ರಾಮಗಳು 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಮಳೆ ಆಶ್ರಿತ ಪ್ರದೇಶವೇ ಹೆಚ್ಚಾಗಿದ್ದು, ಆಗಸ್ಟ್ ಮಾಹೆಯಲ್ಲಿ 80 ಮಿ.ಮೀ. ವಾಡಿಕೆ ಬದಲು 10.32 ಮಿ.ಮೀ ಮಾತ್ರ ಮಳೆ ಬಂದಿದೆ.
ತಾಲೂಕಿನಲ್ಲಿ 1,40,218 ಹೆಕ್ಟೇರ್ ಮಳೆ ಆಶ್ರಿತ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 1,15,415 ಹೆಕ್ಟೇರ್ ಬೆಳೆ ಸಂಪೂರ್ಣ ಒಣಗಿ ಶೇ.82.31 ನಷ್ಟವಾಗಿದೆ. ಅಲ್ಲದೆ ತಾಲೂಕಿನಲ್ಲಿ ಯಾವುದೇ ಜಲ ಮೂಲಗಳಿಲ್ಲದಿರುವುದರಿಂದ ಕುಡಿವ ನೀರಿಗೂ ಸಮಸ್ಯೆ ಉದ್ಭವಿಸಲಿದೆ.
ಹೆಚ್ಚಾಗಿ ಕೂಲಿಕಾರ್ಮಿಕರನ್ನು ಹೊಂದಿರುವ ತಾಲೂಕಿನಲ್ಲಿ ಬರ ಉಂಟಾಗಿ ಜನರು ಉದ್ಯೋಗ ಅರಸಿ ಗುಳೆ ಹೋಗುವ ಸಂದರ್ಭ ಸೃಷ್ಟಿಯಾಗಿದೆ. ಇದನ್ನು ತಡೆಯಲು ಶೀಘ್ರವೇ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಹೆಚ್ಚಿನ ಪರಿಹಾರ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.