

ಹರಪನಹಳ್ಳಿ: ತಾಲೂಕಿನ ದಾವಣಗೆರೆ ಗಡಿ ಭಾಗದ ಕೆಲ ಗ್ರಾಮಗಳು ಭದ್ರಾ ನಾಲೆ ವ್ಯಾಪ್ತಿಗೆ ಒಳಪಟ್ಟಿದ್ದು, ಜಲಾಶಯದಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಅರೆ ನೀರಾವರಿ ಬೆಳೆಗಳ ಅನುಕೂಲಕ್ಕಾಗಿ ಕಾಲುವೆಗಳಿಗೆ ಭಾಗಶಃ ನೀರು ಹರಿಸಲಾಗುವುದು ಎಂದು ದಾವಣಗೆರೆಯ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ಉಪವಿಭಾಗವು ಆಯಾ ಗ್ರಾಮ ಪಂಚಾಯಿತಿ ಹಾಗೂ ನೀರು ಬಳಕೆದಾರರ ಸಂಘಕ್ಕೆ ಸಾರ್ವಜನಿಕ ಪ್ರಕಟಣೆ ನೀಡಿದೆ.
ತಾಲೂಕಿನ ಗ್ರಾಮ ಪಂಚಾಯಿತಿಗಳಾದ ಹಿರೇಮೆಗಳಗೇರಿ, ಲಕ್ಷ್ಮೀಪುರ, ಶಿಂಗ್ರಿಹಳ್ಳಿ, ರಾಗಿಮಸಲವಾಡ, ಕಂಚಿಕೇರಿ ಹಾಗೂ ವಡ್ಡಿನಹಳ್ಳಿ, ಹಿರೇಮೆಗಳಗೇರಿ 1,2,3, ಶಿಂಗ್ರಿಹಳ್ಳಿ, ಸತ್ತೂರು, ಹಳ್ಳಿಕೇರಿ, ರಾಗಿಮಸಲವಾಡ 1,2,3ರ ನೀರು ಬಳಕೆದಾರರ ಸಂಘಗಳ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಅಧಿಸೂಚನೆಯಂತೆ ಹೆಚ್ಚು ನೀರುಣ್ಣುವ ಭತ್ತದ ಬೆಳೆ ಹೊರತುಪಡಿಸಿ ಅರೆ ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ತಿಳಿಯಪಡಿಸಲಾಗಿದೆ.
ಒಂದು ವೇಳೆ ಅರೆ ನೀರಾವರಿ ಬೆಳೆಗಳನ್ನು ಬಿಟ್ಟು ಭತ್ತವನ್ನು ಬೆಳೆದಲ್ಲಿ ನೀರು ಸಿಗದೆ ನಷ್ಟ ಉಂಟಾದಲ್ಲಿ ನೀರಾವರಿ ಇಲಾಖೆ ಜವಾಬ್ದಾರಿಯಾಗುವುದಿಲ್ಲ. ಆದ್ದರಿಂದ ಈ ಭಾಗದ ರೈತರು ಭದ್ರಾನಾಲಾ ವಿಭಾಗದೊಂದಿಗೆ ಸಹಕರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಂಘದ ಅಧ್ಯಕ್ಷರಿಗೆ, ಸದಸ್ಯರಿಗೆ ಪತ್ರ ಮುಖೇನ ಪ್ರಕಟಣೆ ಹೊರಡಿಸಿದೆ.