

ಹರಪನಹಳ್ಳಿ: ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ, ಕಾಂಗ್ರೆಸ್ ಪಕ್ಷದ ಯಾತ್ರೆ ಅಲ್ಲ, ಅದು ದೇಶವಾಸಿಗಳ ಬದ್ಧತೆಯ ನಡಿಗೆ ಎಂದು ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಬಿಜೆಪಿ ಧರ್ಮ ರಾಜಕಾರಣ ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ದೇಶದ ಶಾಂತಿ ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು 150 ದಿನಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿ.ಮೀ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಬೃಹತ್ ಯಾತ್ರೆ, ರಾಜ್ಯದ ಗುಂಡ್ಲಪೇಟೆಯಿಂದ ಆರಂಭವಾಗಿ ಅ.19 ರಂದು ಬಳ್ಳಾರಿ ತಲುಪಲಿದ್ದು, ಅಂದು ಬೃಹತ್ ಸಮಾವೇಶ ನಡೆಯಲಿದೆ. ಹರಪನಹಳ್ಳಿ ತಾಲೂಕಿನಿಂದ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಸ್ವಾತಂತ್ರೃ ಪೂರ್ವ ಮತ್ತು ನಂತರದಲ್ಲಿ ಅನೇಕ ಯಾತ್ರೆ ಮತ್ತು ಪಾದಯಾತ್ರೆಗಳು ನಡೆದಿವೆ. ಆದರೆ, ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆ ದೇಶದ ಜನರ ಹೃದಯ ಒಗ್ಗೂಡಿಸುವುದಾಗಿದೆಯೇ ಹೊರತು ಬಿಜೆಪಿಯವರಂತೆ ಜನರ ಹೃದಯ ಹೊಡೆಯುವುದಲ್ಲ. ದೇಶದಲ್ಲಿ ಪ್ರಸ್ತುತ ಆದಾನಿ- ಅಂಬಾನಿ ಮೂಲಕ ಸ್ವಾತಂತ್ರೃ ಹರಣವಾಗುತ್ತಿದೆ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳೆ ಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ಜನರಿಗೆ ಅರಿವು ಮೂಡಿಸುವುದು ರಾಹುಲ್ ಗಾಂಧಿ ಧ್ಯೇಯವಾಗಿದೆ. ತಾಲೂಕಿನ ಕಾರ್ಯಕರ್ತರು ಬಳ್ಳಾರಿಯಲ್ಲಿ ನಡೆವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಭಾರತ್ ಜೋಡೋ ಯಾತ್ರೆ, ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು, ರೈತರು, ಸಾಮಾನ್ಯರ ಬದುಕು ಹಸನಾಗಿಸುವ ಉದ್ದೇಶ ಹೊಂದಿದೆ. ಬಳ್ಳಾರಿಯ ಸಮಾವೇಶಕ್ಕೆ ಹರಪನಹಳ್ಳಿಯಿಂದ ಹೆಚ್ಚಿನ ಕಾರ್ಯಕರ್ತರನ್ನು ಕರೆತರಲು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ತೆಲಂಗಾಣ ಶಾಸಕ ಶ್ರೀಧರ್ ಬಾಬು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವಯೋಗಿ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾರೆಡ್ಡಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಪ್ರಭಾಕರ ಗೌಡ, ಎಂ.ಪಿ. ವೀಣಾ ಮಹಾಂತೇಶ್, ಮುಖಂಡರಾದ ಎಂ.ಟಿ. ಸುಭಾಷ್‌ಚಂದ್ರ, ಎಚ್.ಬಿ. ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಪ್ರೇಮಕುಮಾರ್, ಎಚ್.ಕೆ. ಹಾಲೇಶ್, ಮುಖಂಡರಾದ ಶಶಿಧರ್ ಪೂಜಾರ್, ಅಂಬಾಡಿ ನಾಗರಾಜ್, ಎಂ.ವಿ. ಅಂಜಿನಪ್ಪ, ಎಂ. ರಾಜಶೇಖರ್, ಮುತ್ತಿಗಿ ಜಂಭಣ್ಣ, ಎಲ್.ಬಿ.ಹಾಲೇಶ್ ನಾಯ್ಕ, ಅರುಣ್ ಪೂಜಾರ್, ಹುಲಿಕಟ್ಟಿ ಚಂದ್ರಪ ಇತರರಿದ್ದರು.