

ಹರಪನಹಳ್ಳಿ: ತಾಲೂಕಿಗೆ ವಸತಿ ನಿಲಯ ಹಾಗೂ ಮುರಾರ್ಜಿ ದೇಸಾಯಿ ಶಾಲೆ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ತರಳಬಾಳು ಸಮುದಾಯ ಭವನದ ಆವರಣದಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ನಿಮಿತ್ತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಾಂಪೌಂಡ್, ಶೌಚಗೃಹ, ಬಿಸಿಯೂಟದ ಕೋಣೆಗಳ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.
ಮಕ್ಕಳಿಗೆ ವಿದ್ಯೆ ಜತೆ ಸಂಸ್ಕಾರ ಕಲಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಶಿಕ್ಷಕರ ಬೇಡಿಕೆಗಳ ಕುರಿತು ಸಿಎಂ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಆದರೆ, ಬೀದಿಗಿಳಿದು ಪ್ರತಿಭಟನೆ ಮಾಡಬೇಡಿ. ಬೇಕಾದರೆ ಕಪ್ಪು ಪಟ್ಟಿ ಕಟ್ಟಿಕೊಂಡು ಪಾಠ ಮಾಡಿ ಎಂದು ಸಲಹೆ ನೀಡಿದರು. ಸ್ವಚ್ಛತೆ, ಉತ್ತಮ ವಾತಾವರಣ ಕಾಪಾಡಿಕೊಂಡು ಬರುವ ಶಾಲೆಗಳಿಗೆ ಬಹುಮಾನ ನೀಡುವುದಾಗಿ ತಿಳಿಸಿದರು.
ಬಿಇಒ ಯು.ಬಸವರಾಜಪ್ಪ ಮಾತನಾಡಿ, ನಾವು ಗುಣಾತ್ಮಕ ಶಿಕ್ಷಣದ ಕಡೆಗೆ ಹೆಜ್ಜೆ ಹಾಕಿದ್ದೇವೆ. ಈ ವರ್ಷ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೊರಗಡೆಯಿಂದ 88 ಶಿಕ್ಷಕರು ಬಂದಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಿದ್ದೇವೆ ಎಂದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಮಕರಬ್ಬಿ ಷರೀಫ, ತಾಪಂ ಇಒ ಪ್ರಕಾಶ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಯರಾಜ, ಬಿಆರ್‌ಸಿ ಹೊನ್ನತ್ತೆಪ್ಪ,ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮಖಪ್ಪ, ಲತಾ ರಾಥೋಡ್, ಬಿ.ಗುರುಮೂರ್ತಿ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ, ಓಬಳೇಶ, ಮಹಾದೇವಕ್ಕ ಇತರರಿದ್ದರು.