

ಹರಪನಹಳ್ಳಿ: ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ವಿಪ್ ಜಾರಿ ವಿಚಾರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಹಾರಾಳು ಅಶೋಕ ಹಾಗೂ ತಾಲೂಕು ಸಂಘಟನೆ ಉಸ್ತುವಾರಿ ಬಲ್ಲಾಹುಣಸಿ ರಾಮಣ್ಣ ನಡುವೆ ಜಗಳವಾಗಿದ್ದು, ಬಡಿದಾಡಿಕೊಂಡಿದ್ದಾರೆ.
ಈ ಹಿಂದೆ ಕರೆದಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಗೈರಾದ ಸದಸ್ಯರಿಗೆ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ತಾಲೂಕು ಉಸ್ತುವಾರಿ ಬಲ್ಲಾಹುಣಸಿ ರಾಮಣ್ಣ ವಿಪ್ ಜಾರಿಗೊಳಿಸಿ ನೋಟಿಸ್ ಜಾರಿಗೊಳಿಸಿದ್ದರು. ಈ ಕುರಿತು ಬಿಜೆಪಿ ಮಂಡಲ ಪದಾಧಿಕಾರಿಗಳ ವಾಟ್ಸಾೃಪ್ ಗ್ರೂಪ್‌ನಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾರಾಳು ಅಶೋಕ ಸೇರಿ ಇತರರು ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸೋಮವಾರ ಮಧ್ಯಾಹ್ನ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಹಾರಾಳು ಅಶೋಕ ಅವರು, ವಿಪ್ ಜಾರಿಗೊಳಿಸಲು ಜಿಲ್ಲಾಧ್ಯಕ್ಷರಿಗೆ ಮಾತ್ರ ಹಕ್ಕು ಇದೆ. ನಮಗೆ ನೋಟಿಸ್ ನೀಡಲು ನಿಮಗೇನು ಅಧಿಕಾರವಿದೆ ಎಂದು ಬಲ್ಲಾಹುಣಸಿ ರಾಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಒಂದು ಗಂಟೆಗೂ ಹೆಚ್ಚು ಹೊತ್ತು ವಾಗ್ವಾದ ನಡೆದಿದ್ದು, ಏಕವಚನದಲ್ಲಿ ಇಬ್ಬರೂ ಬೈದಾಡಿಕೊಂಡಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಇಬ್ಬರೂ ಕೈ ಕೈ ಮಿಲಾಯಿಸಿದ್ದು, ರಾಮಣ್ಣ ಅವರು ಅಶೋಕ ಕಪಾಳಕ್ಕೆ ಹೊಡೆದಿದ್ದಾರೆ. ಅಶೋಕ ಬೆಂಬಲಿಗರು ಬೆಂಬಲಿಗರು ಬಲ್ಲಾಹುಣಸಿ ರಾಮಣ್ಣ ಮೇಲೆ ಮುಗಿಬಿದ್ದು, ವಾಗ್ವಾದಕ್ಕೆ ಇಳಿದಿದ್ದಾರೆ.
ಈ ವೇಳೆ ರಾಮಣ್ಣ ಮೂಗಿಗೆ ಪೆಟ್ಟಾಗಿದೆ. ಜಗಳ ಅತಿರೇಕಕ್ಕೆ ಹೋಗಬಹುದು ಎನ್ನುವುದನ್ನು ಮನಗಂಡ ಕಾರ್ಯಕರ್ತರು ಬಲ್ಲಾಹುಣಸಿ ರಾಮಣ್ಣ ಅವರನ್ನು ಕೊಠಡಿಯೊಂದಲ್ಲಿ ಇರಿಸಿ ಕೆಲ ಸಮಯ ಬಾಗಿಲು ಮುಚ್ಚಿದ್ದಾರೆ. ಪರಿಸ್ಥಿತಿ ತಿಳಿಯಾದ ಬಳಿಕ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಇಬ್ಬರಿಗೂ ಪಕ್ಷದ ಪ್ರಮುಖರು ಕರೆ ಮಾಡಿ ಸಂಧಾನ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಘಟನೆಯಿಂದ ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯ ಬಯಲಾಗಿದ್ದು, ಕಾರ್ಯಕರ್ತರಲ್ಲಿ ಗೊಂದಲ, ಮುಜುಗರ ಉಂಟು ಮಾಡಿದೆ.