

ಹರಪನಹಳ್ಳಿ: ಸಾಮಾನ್ಯ ಕ್ಷೇತ್ರವಾದ ನಂತರ ಹರಪನಹಳ್ಳಿಯಲ್ಲಿ ಎರಡು ಬಾರಿ ಬಿಜೆಪಿ ಮತ್ತು ಒಮ್ಮೆ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಮಾಜಿ ಸಚಿವ ಎನ್.ಎಂ.ನಬೀ ಸಾಹೇಬ್ ಟೀಕಿಸಿದರು.
ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕರೊಂದಿಗೆ ಸಂಪರ್ಕ ಸಭೆ ನಡೆಸಿ ಮಾತನಾಡಿದರು. ಎರಡೂ ರಾಷ್ಟ್ರೀಯ ಪಕ್ಷಗಳು ರೈತರು, ಬಡವರು, ಮಹಿಳೆಯರು, ಯುವಕರು, ದೀನ-ದಲಿತರ ಪರವಾಗಿ ಕೆಲಸ ಮಾಡಿಲ್ಲ. ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರಂತೆ ಕೆಲಸ ಮಾಡಿಲ್ಲ ಎಂದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ಯೋಜನೆಯನ್ನು ರೂಪಿಸಿದ್ದಾರೆ. ಇಂಥವರು ಮತ್ತೊಮ್ಮೆ ಸಿಎಂ ಆಗಬೇಕು ಎಂದರು. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ನೂರ್ ಅಹ್ಮದ್ ಮಾತನಾಡಿ, ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೆ ಮತಚಲಾವಣೆ ಮಾಡಬೇಕು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ, ಡಾ.ಸುರೇಶ, ವೆಂಕಟೇಶರೆಡ್ಡಿ ಹಂಚಿನಮನಿ ಕೆಂಚಪ್ಪ, ಮಲ್ಲಿಕಾರ್ಜುನಗೌಡ, ಬುಳ್ಳನಗೌಡ ಇತರರು ಇದ್ದರು.