ಧಾರ್ಮಿಕ ಆಚರಣೆಗಳಿಂದ ಧರ್ಮ ರಕ್ಷಣೆ

Untitled design(14)
ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ನೂತನ ಕರಗಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಭೋವಿ ಸಮಾಜದ ತಾಲೂಕು ಅಧ್ಯಕ್ಷ ಎಂ ಬಿ ಅಂಜಿನಪ್ಪ, ಪ್ರಮುಖರಾದ ಅರ್ಜುನಪ್ಪ, ಚಂದ್ರಧರ ಭಟ್, ಬಸವರಾಜಯ್ಯ, ವೀರೇಶ, ಕೆಂಗಪ್ಪ, ಸಿ ಶಿವಪ್ಪ, ಪೂಜಾರಿ ತಿಮ್ಮೇಶ್, ಶೇಖರಪ್ಪ, ದುರುಗಪ್ಪ, ಹೊನ್ನಪ್ಪ ಇತರರಿದ್ದರು.
Published on

ಹರಪನಹಳ್ಳಿ: ಮೂಢನಂಬಿಕೆಯಿಂದ ಹೊರ ಬಂದು ಶಿಕ್ಷಣದಿಂದ ವೈಚಾರಿಕತೆ ಅಳವಡಿಸಿಕೊಂಡಾಗ ಮಾತ್ರ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಭೋವಿ ಗುರುಪೀಠ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅರಸೀಕೆರೆ ಹೋಬಳಿಯ ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ಬುಧವಾರ ಕರಗಲ್ಲು ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ದೇವಸ್ಥಾನಕ್ಕೆ ದೇವರ ಪೂಜೆಗೆ ತೆಗೆದುಕೊಂಡು ಹಣ್ಣುಕಾಯಿ ಪೂಜೆಯ ಬಳಿಕ ಪ್ರಸಾದ ಎನಿಸಿಕೊಳ್ಳುವ ಸಂಸ್ಕಾರ ನಮ್ಮಲ್ಲಿದೆ. ದೇವರ ಗುಡಿಯು ಗಡಿ ಪ್ರವೇಶ ಕರಿಗಲ್ಲು ಮೂಲಕ ನಡೆಯಲಿದೆ. ಭಕ್ತರು ಸದ್ವಿಚಾರ ಮೂಲಕ ಸಂಸ್ಕಾರಯುತ ಬದುಕು ನಡೆಸಬೇಕು. ಇಂದಿನ ಮಕ್ಕಳು ಶೈಕ್ಷಣಿಕವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಜ್ಞಾನ ವಿಜ್ಞಾನದ ಅರಿವು ಪಡೆದುಕೊಳ್ಳುವುದು ಉತ್ತಮ. ಮೌಢ್ಯ-ಕಂದಾಚಾರಗಳ ಮೂಲಕ ಶೋಷಣೆ ನಡೆಯುತ್ತಿದೆ. ವೈಚಾರಿಕತೆಯ ಮೂಲಕ ಧಾರ್ಮಿಕ ಆಚರಣೆ ಅರ್ಥ ತಿಳಿದವರಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯವೆಂದರು.

ರಾಮಘಟ್ಟ ಕಟ್ಟೆಮನೆ ಪುರವರ್ಗ ಮಠದ ರೇವಣಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಪರಂಪರೆಯನ್ನು ಸಾರುವ ಪ್ರತೀಕವಾಗಿರುವ ಕರಗಲ್ಲು ನಶಿಸಿ ಹೋಗಿರುವ ಗ್ರಾಮಗಳ ಪುರಾವೆಗೆ ಸಾಕ್ಷಿಯಾಗಿದೆ. ಅವುಗಳ ರಕ್ಷಣೆಯ ಅಗತ್ಯವಿದೆ, ಧಾರ್ಮಿಕತೆಯನ್ನು ಒಳಗೊಂಡ ಶಿಕ್ಷಣದ ಅಗತ್ಯವಿದೆ, ಸರ್ವರನ್ನು ಕೃತಜ್ಞರನ್ನಾಗಿ ನೋಡಿದ ಭೋವಿ ಸಮಾಜದ ಹಿನ್ನೆಲೆಯನ್ನು ಅರಿತು ಮಾದರಿ ಜೀವನ ಸಾಗಿಸಬೇಕು ಎಂದರು.

ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, ದೇವರು, ದೇವಸ್ಥಾನದ ಪೂಜೆ ಪುನಸ್ಕಾರಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಕರಗಲ್ಲು ಗ್ರಾಮಕ್ಕೆ ತಗುಲುವಂತ ಸೋಂಕು ತಗಲದಂತೆ ತಡೆಯುವ ದಿವ್ಯಶಕ್ತಿಯನ್ನು ಹೊಂದಿದೆ ಎಂದರು. ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net