

ಪಾಂಡವಪುರ: ಆಕಸ್ಮಿಕವಾಗಿ ಮರಣ ಹೊಂದಿದ ಮೂರು ಕೋತಿಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಹಾರೋಹಳ್ಳಿ ಗ್ರಾಮಸ್ಥರು, ಇದೀಗ ಹನ್ನೊಂದು ದಿನಗಳ ಬಳಿಕ ಶುಕ್ರವಾರ ಹಾಲು-ತುಪ್ಪ ನೆರವೇರಿಸಿ ಪೂಜೆ ಸಲ್ಲಿಸಿದರು.
ಪಟ್ಟಣದ ಹಾರೋಹಳ್ಳಿ ಗ್ರಾಮದ ಸಿಪಾಯಿ ಕರಿಯಪ್ಪ ಅವರ ಜಮೀನಿನಲ್ಲಿ ಮೇ.7 ರಂದು ಮೂರು ಕೋತಿಗಳು ಆಕಸ್ಮಿಕವಾಗಿ ಮರಣ ಹೊಂದಿದವು. ಅಂದು ಗ್ರಾಮಸ್ಥರು ಹಿಂದು ಧಾರ್ಮಿಕ ವಿಧಿ ವಿಧಾನಗಳಂತೆ ಕೋತಿಗಳಿಗೆ ಗುದ್ದ ತೆಗೆದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಇದೀಗ ಗುದ್ದವನ್ನು ಹೂವು, ತುಳಸಿ ಹಾರಗಳಿಂದ ಸಿಂಗರಿಸಿ ಬಾಳೆಹಣ್ಣು, ಕಡಲೇಕಾಯಿ, ನಿಪ್ಪಿಟ್ಟು, ಎಳನೀರು, ಚಕ್ಕುಲಿ, ಸೇಬು, ದಾಕ್ಷಿ, ಕಡಲೇಪುರಿ ಸೇರಿದಂತೆ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಕೋತಿಗಳ ಭಾವಚಿತ್ರದ ಮುಂದೆ ಇಟ್ಟಿದ್ದರು. ಬಳಿಕ ಗ್ರಾಮಸ್ಥರು ಗುದ್ದಕ್ಕೆ ಹಾಲು-ತುಪ್ಪ ಸುರಿದು ಭಕ್ತಿ ಪ್ರದರ್ಶಿಸಿದರು.
ಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿ ಲಕ್ಷ್ಮೀಸಾಗರ ಪ್ರತಾಪ್ ಅವರಿಂದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳದಲ್ಲಿ ನೂರಾರು ಜನರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಜತೆಗೆ ಪ್ರಸಾದವಾಗಿ ಬಾಳೆಹಣ್ಣಿನ ರಸಾಯನ ವಿತರಿಸಲಾಯಿತು.
ಹಾರೋಹಳ್ಳಿ ಗ್ರಾಮಸ್ಥರಾದ ಹಟೀಶ್, ಎಚ್.ಸಿ.ಕೃಷ್ಣೇಗೌಡ ಪಟೇಲ, ಭರತ್ ಪಟೇಲ, ಡೈಮಂಡ್ ರವಿ, ಮಂಜಣ್ಣ, ಮಂಜು, ಮಧು, ಬೆಟ್ಟು ಗಿರೀಶ್, ಟಕ್ಕ ಬಾಯಿ ಮಂಜ, ಚಿಕ್ಕಣ್ಣ, ಸುರೇಶ್, ರಾಮೇಗೌಡ ಇತರರು ಇದ್ದರು.