

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೈನ ಧರ್ಮ ಸಿದ್ಧಾಂತದ ಆಚರಣೆಗಳಲ್ಲಿ ಒಂದಾದ ದಶಲಕ್ಷಣ ಪರ್ವದ 10 ದಿನಗಳ ಅನುಷ್ಠಾನ ಮತ್ತು ಧರ್ಮ ಚಿಂತನೆಯ ಕೊನೇ ಘಟ್ಟವಾಗಿ ಆಚರಿಸುವ ಕ್ಷಮಾವಳಿಯಿಂದ, ಮನುಕುಲದ ಬಿರುಕುಗೊಂಡ ಸಂಬಂಧಗಳು ಬೆಸೆದು ಜೀವನ ವಿಧಾನದಲ್ಲಿ ಸಾಮರಸ್ಯ ಅಂಕುರಿಸುತ್ತದೆ ಎಂದು ಅಮ್ಮಿನಬಾವಿ-ವರೂರು ಜೈನ ಮಠಗಳ ಯತಿಗಳಾದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 10 ದಿನಗಳ ದಶ ಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕ್ಷಮಾವಳಿಯಿಂದಾಗಿ ಆತ್ಮದ ಸ್ಥಿತಿಯು ದ್ವೇಷ, ವೈರುಧ್ಯ, ಸಂಘರ್ಷದಂತಹ ಜನವಿರೋಧಿ ಮನೋಭಾವಗಳಿಂದ ಮುಕ್ತವಾಗಿ ಜಿನಸನ್ನಿಧಾನ ಬಯಸುತ್ತದೆ. ಜೈನ ಧರ್ಮದ ತತ್ವಾದರ್ಶಗಳ ಚಿಂತನೆಯು ಮೋಕ್ಷ ಮಾರ್ಗ ಕೇಂದ್ರೀಕೃತವಾಗಿದೆ. ದಶಲಕ್ಷಣ ಪರ್ವದ ಸಂದರ್ಭದಲ್ಲಿ ನಡೆಸುವ ವಿಶೇಷ ಪೂಜಾದಿಗಳ ಮೂಲಕ ಶ್ರಾವಕ-ಶ್ರಾವಕಿಯರು ಕ್ರಿಯೆ, ಮಾತು ಮತ್ತು ಮನಸ್ಸುಗಳಲ್ಲಿ ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಭಾವತನ್ಮಯತೆಯಲ್ಲಿ ಕ್ಷಮಾವಳಿಗೆ ಒಳಗಾಗಬೇಕಾಗುತ್ತದೆ ಎಂದರು.
ಕ್ಷಮಾವಳಿ ಕುರಿತು ಉಪನ್ಯಾಸ ನೀಡಿದ ಗುರುಮೂರ್ತಿ ಯರಗಂಬಳಿಮಠ, ಅಹಂಕಾರ ಮರೆತ ಮುಕ್ತ ಮನಸ್ಥಿತಿಯ ಕ್ಷಮಾವಳಿ ಫಲ ನೀಡುತ್ತದೆ. ಕ್ಷಮಾವಳಿ ಮತ್ತು ಅಹಿಂಸೆ ಒಟ್ಟೊಟ್ಟಿಗೇ ಇರುವುದರಿಂದ ಮಾಡಿರುವ ಪ್ರಮಾದಗಳು ಹಿಂಸೆಗೆ ಕಾರಣವಾಗದಂತೆ ತಪ್ಪೊಪ್ಪಿಕೊಂಡು ಮುಕ್ತವಾಗಿ ಕ್ಷಮೆಯಾಚನೆ ಮಾಡುವುದೇ ಕ್ಷಮಾವಳಿಯ ಬಹುಮುಖ್ಯ ಆಶಯ ಎಂದರು.
ತಾಪಂ ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಸ್.ಪತ್ರಾವಳಿ, ದೀಪಕ ದೇಸಾಯಿ ಮಾತನಾಡಿದರು. ಸಮಾಜದ ಮುಖಂಡ ಭುಜಬಲಿ ದೇಸಾಯಿ, ಶಂಕರ ರಾೂನವರ, ಈಶ್ವರ ಗಡೇಕಾರ, ನೇಮಣ್ಣ ಧಾರವಾಡ, ನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ಶಶಿಕಲಾ ದೇಸಾಯಿ, ಭೀಮಶಿ ಜಗಾಪುರ, ಸಮ್ಮೇದ್ ಲೋಕೂರ, ಮಂಜುನಾಥ ಗುಡ್ಡದಮನಿ, ಬಾಳು ಧಾರವಾಡ, ಪ್ರಸನ್ನ ದೇಸಾಯಿ, ಭರತೇಶ ದೇಸಾಯಿ, ತವನಪ್ಪ ಲೋಕೂರ, ನೇಮಿಚಂದ್ರ ನವಲೂರ, ಇತರರು ಇದ್ದರು.
ಅರ್ಚನಾ ಮೋರೆ ಸ್ವಾತಿಸಿದರು. ಅರುಣ ನವಲೂರ ನಿರೂಪಿಸಿದರು.