

ಸರಗೂರು : ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹಚಿಂತನೆ ಹಾಗೂ ಕ್ರಿಯೆ ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ ಎಂದು ಸರಗೂರು ಪೊಲೀಸ್ ಠಾಣೆ ಎಸ್‌ಐ ಆರ್.ಕಿರಣ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗ ಅಭ್ಯಾಸ ಮಾಡಿ ಮಾತನಾಡಿದರು. ಬದುಕನ್ನು ಹೇಗೆ ಬದುಕಬೇಕು ಎನ್ನುವ ಕುರಿತು ಯೋಗ ತಿಳಿಸುತ್ತದೆ. ಮನುಕುಲದ ಬೇರೆ ಬೇರೆ ನಾಗರಿಕತೆಗಳು ತಮ್ಮದೇ ಆದ ಚಿಂತನೆಗಳನ್ನು ಬೆಳೆಸಿಕೊಂಡವು. ಯೋಗ ವ್ಯಾಯಾಮ ಮಾತ್ರವಲ್ಲದೆ ಪ್ರಕೃತಿಯ ಜತೆಗೆ ಏಕತೆಯ ಅರ್ಥವನ್ನು ತಿಳಿಯಲು ನೆರವಾಗುತ್ತದೆ. ಯೋಗ ನಮ್ಮ ಜೀವನಶೈಲಿ ಹಾಗೂ ಪರಿಸರ ಪ್ರಜ್ಞೆ ಹಮಾಮಾನ ಬದಲಾವಣೆ, ಆರೋಗ್ಯ ಸುಧಾರಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳು ಸಂಘ ಸಂಸ್ಥೆಗಳ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪಟ್ಟಣದ ಜೆಎಸ್‌ಎಸ್, ಪ್ರಗತಿ ವಿದ್ಯಾಸಂಸ್ಥೆ, ಪೋಲಿಸ್ ಠಾಣೆ, ಗ್ರಾಮೀಣ ಭಾಗದ ಮುಳ್ಳೂರು, ಹಾದನೂರು, ಮುತ್ತಿಗೆ ಹುಂಡಿ, ಬಿ ಮಟಕೆರೆ ಸೇರಿದಂತೆ ಇನ್ನಿತರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಜತೆಗೂಡಿ ಯೋಗಾಭ್ಯಾಸ ಮಾಡಿದರು.
ಮುಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮುಳ್ಳೂರು ಮಾತನಾಡಿದರು. ಯೋಗದ ಮೂಲವನ್ನು ಹುಡುಕಿ ಸಾಗಿದಾಗ ಭಗವಾನ್ ಶಿವನಲ್ಲಿ ಬಂದು ಸೇರುತ್ತದೆ. ಶಿವ ದೇವರು ’ಆದಿ ಯೋಗಿ’ ಅಥವಾ ಯೋಗದ ಮೊದಲ ಗುರು ಆಗಿದ್ದು, ಪ್ರಪಂಚದ ಎಲ್ಲ ಯೋಗಿಗಳಿಗೆ ಶಿಕ್ಷಕನೆಂದು ಹೇಳಲಾಗುತ್ತದೆ ಎಂದು ತಿಳಿಸಿದರು.
ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದರು.
ಹಾದನೂರು ಸರ್ಕಾರಿ ಶಾಲೆಯಲ್ಲಿ ಶನಿವಾರ ಯೋಗ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಆಧುನಿಕ ಯುಗದಲ್ಲಿ ನಾವು ಬಳಲುತ್ತಿರುವ ಅನೇಕ ಸಮಸ್ಯೆಗಳಿಗೆ ಯೋಗ ರಾಮಬಾಣ. ಆಧುನಿಕ ಜೀವನಶೈಲಿಯ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ. ಜನರು ಒತ್ತಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ, ಮಧುಮೇಹ ಹಾಗೂ ರಕ್ತದೊತ್ತ್ತಡದಂತಹ ಜೀವನಶೈಲಿ ಸಂಬಂಧಿತ ರೋಗದಿಂದ ಬಳಲುತ್ತಿದ್ದಾರೆ. ಶಾಂತಿಯಿಲ್ಲದೆ ನರಳಾಡುತ್ತಿರುವ ಇಂದಿನ ಯುವ ಜನಾಂಗ ಔಷಧಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ ಎಂದರು.