

ಬೈಲುಕುಪ್ಪೆ: ಬೈಲುಕುಪ್ಪೆಯ ಬಿ.ಎಂ. ರಸ್ತೆ ಪಕ್ಕದ ಬಯಲು ರಂಗ ಮಂದಿರದ ಆವರಣದಲ್ಲಿ ಶ್ರೀ ಗಜಾನನ ಸೇವಾ ಸಮಿತಿಯಿಂದ ಗಣೇಶೋತ್ಸವ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗಣಪತಿಯನ್ನು ಬುಧವಾರ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಗ್ರಹ ದಾನಿಗಳಾದ ಬೈಲುಕುಪ್ಪೆ ಗ್ರಾಮದ ಅಶೋಕ್ ಬಾಬು ಕುಟುಂಬ 7.5 ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ವಿವಿಧ ಹೋಮ ಹವನಗಳ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಸಮಿತಿ ಅಧ್ಯಕ್ಷ ಎ.ಸಿ.ರಾಮಕೃಷ್ಣ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಿಂದು, ಮುಸ್ಲಿಂ ಎಂಬ ಭೇದವಿಲ್ಲದೆ ಹಿಂದಿನಿಂದಲೂ ಎಲ್ಲ ವರ್ಗದವರು ಜತೆಗೂಡಿ ಹಬ್ಬ ಆಚರಿಸುತ್ತಿದ್ದೇವೆ. ಈ ಬಾರಿ 15 ದಿನ ವಿಶೇಷ ಪೂಜೆ ಹಾಗೂ ನಾಟಕ, ಆರ್ಕೆಸ್ಟ್ರಾ ಇರುತ್ತದೆ. ಬೈಲುಕುಪ್ಪೆ ಪಿಎಸ್‌ಐ ರವಿಕುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್, ಆಂಥೋನಿ, ನಟರಾಜ್, ಮಹದೇವಪ್ಪ, ಖಾದರ್, ಪೀರ್ ಪಾಷಾ, ಅವಿನಾಶ್ ಚೇತನ್, ಶಿವ ಸುರೇಶ್, ಗೋವಿಂದ ಇತರರು ಇದ್ದರು.