ಸಾಮರಸ್ಯದ ಸಹಬಾಳ್ವೆಯಿಂದ ಜೀವನ ಸಾರ್ಥಕ

Oplus_131072
ಬೆಲಹೊಂಗಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ರಂಭಾಪುರಿ ಜಗದ್ಗುರು, ಪದ್ಮಶ್ರೀ ಮಂಜಮ್ಮ ಜೋಗತಿ ಉದ್ಘಾಟಿಸಿದರು. ವೀರಭದ್ರ ಶಿವಯೋಗಿ ಶಿವಾಚಾರ್ಯರು, ಡಾ. ಚಂದ್ರಶೇಖರ ಶಿವಾಚಾರ್ಯರು ಇತರರಿದ್ದರು.
Published on

ಬೈಲಹೊಂಗಲ: ದೇಶದ ಉಜ್ವಲ ಭವಿಷ್ಯಕ್ಕೆ ಧರ್ಮ ಪರಿಪಾಲನೆ ಅಗತ್ಯ. ಸಂಸ್ಕಾರಯುತ ಜೀವನದಿಂದ ಬದುಕಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮಾನವ ಜೀವನ ಅಮೂಲ್ಯ. ಸ್ನೇಹ ಹಾಗೂ ಸಂಬಂಧ ಹೊಂದಿ ಸಾಮರಸ್ಯದಿಂದ ಬಾಳಿದರೆ ಜೀವನ ಸಾರ್ಥಕಗೊಳ್ಳುತ್ತದೆ. ಕಾಯಕ, ಆಚಾರ, ಅಭಿಮಾನ, ಸಂಸ್ಕಾರ, ಸದ್ಗುಣ, ಮನಸ್ಸು ಮತ್ತು ಅನುಭವ ಬದುಕಿಗೆ ಪೂರಕವಾಗಿವೆ ಎಂದರು.

ಶಾಂಭವಿಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಡಾ.ಮಂಜಮ್ಮ ಜೋಗತಿ, ಸದೃಢ ದೇಶ ನಿರ್ಮಾಣಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಮುಖ್ಯ. ಹೆತ್ತವರು, ಗುರುಗಳು ಮತ್ತು ಹಿರಿಯರನ್ನು ಗೌರವಿಸುವ ಮನೋಭಾವ ರೂಢಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳನ್ನು 1-10ನೇ ತರಗತಿವರೆಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿಸುವ ಮೂಲಕ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಅಂದಾಗ ಮಾತ್ರ ನಾಡು, ನುಡಿ ಉಳಿವಿಗೆ ಸಹಕಾರಿಯಾಗುತ್ತದೆ. ಮಹಾತ್ಮರ ವಚನ ಆಲಿಸಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.

ಬಿಗ್‌ಬಾಸ್ ವಿನ್ನರ್ ಹಣಮಂತ, ಸರಿಗಮಪ ರಮೇಶ ಲಮಾಣಿ, ಕನ್ನಡ ಕೋಗಿಲೆ ವಿಜೇತ ಕಾಶಿಮ, ಜಾನಪದ ಕಲಾವಿದರಾದ ಮೆಲಾರಿ, ಬೊಂಬಾಟ ಬಸಣ್ಣ, ಶಾಶ್ವತಿ ಕಶ್ಯಪ, ದಿಯಾ ಹೆಗಡೆ ವಿವಿಧ ಗೀತೆಗಳನ್ನು ಹಾಡಿ ರಂಜಿಸಿದರು. ಕಟಕೋಳ, ಎಂ ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯರು, ಶಿರಕೋಳದ ಗುರುಸಿದ್ದ ಶಿವಾಚಾರ್ಯರು, ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಸಿ.ಕೆ. ಮೆಕ್ಕೆದ, ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಮಲ್ಲಿಕಾರ್ಜುನ ಬೋಳನ್ನವರ, ಮಹಾಂತೇಶ ಮತ್ತಿಕೊಪ್ಪ, ಮಂಜುನಾಥ ಹಿರೇಮಠ, ಶಿವಾನಂದ ಬೆಳಗಾವಿ, ಸುನೀಲ ವೇರ್ನೆಕರ, ಸುವರ್ಣಾ ಅಳಗುಂಡಿ ಇತರರಿದ್ದರು. ಧರ್ಮದರ್ಶಿ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಸ್ವಾಗತಿಸಿದರು. ಮುತ್ತು ಮತ್ತಿಕೊಪ್ಪ, ಶೆಲಾ ಕೊಕ್ಕರಿ ನಿರೂಪಿಸಿದರು.

ಆಕರ್ಷಕ ಬೆಳ್ಳಿ ಸಾರೋಟ ಮೆರವಣಿಗೆ: ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ವಾದ್ಯಮೇಳದೊಂದಿಗೆ ಬಾಳೆ ಹೊನ್ನೂರು ರಂಭಾಪುರಿಯ ವೀರಸಿಂಹಾಸನಾೀಶ್ವರ ಜಗದ್ಗುರು ಡಾ. ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಆಕರ್ಷಕ ಬೆಳ್ಳಿ ಸಾರೋಟ ಮೆರವಣಿಗೆಯನ್ನು ಪಟ್ಟಣದ ಜನತೆ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net