

ಕಳಸ: ನದಿ ಮೂಲಗಳನ್ನೇ ಒಡಲಲ್ಲಿ ಕಟ್ಟಿಕೊಂಡು ಬಯಲು ಸೀಮೆಗಳಿಗೆ ನೀರುಣಿಸುತ್ತಿದ್ದ ಕಳಸ ತಾಲೂಕಿನಲ್ಲಿ ಕಳೆದ ಬಾರಿ ಮಳೆ ಕೊರತೆ ಹಾಗೂ ಹೆಚ್ಚಿದ ತಾಪಮಾನದಿಂದ ನದಿಗಳಲ್ಲಿ ನೀರಿನ ಒಳ ಹರಿವಿನ ಕೊರತೆ ಉಂಟಾಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.
ಮಳೆಗಾಲದಲ್ಲಿ ಜಲಪ್ರಲಯ ಭೀತಿಯೊಡ್ಡುತ್ತಿದ್ದ ಭದ್ರಾ ನದಿ ಬತ್ತಿ ನೀರಿನ ಹರಿವು ಕೆಳಮಟ್ಟಕೆ ಇಳಿದಿದೆ. ಕಳಸ ತಾಲೂಕಿನ ಕುದುರೆಮುಖದ ಗಂಗಾ ಮೂಲ ಪ್ರದೇಶವು ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಯ ಉಗಮ ಸ್ಥಾನ. ಈ ಭಾಗದಲ್ಲಿ ಪ್ರತಿ ವರ್ಷ ಹೆಚ್ಚು ಮಳೆ ಬಿದ್ದು ಕರಾವಳಿ ಮತ್ತು ಬಯಲು ಸೀಮೆಯ ಕೋಟ್ಯಾಂತರ ಜನ, ಪ್ರಾಣಿ, ಪಕ್ಷಿ ಸಂಕುಲಗಳಿಗೆ ಜೀವನಾಡಿಯಾಗಿದೆ. ಆದರೆ ಕಳೆದ ಬಾರಿ ವಾಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ನದಿ ಮೂಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
2022ರ ಫೆಬ್ರವರಿಯಿಂದ 2023ರ ಫೆಬ್ರವರಿವರೆಗೆ 149.16 ಇಂಚು ಮಳೆಯಾಗಿದ್ದು, 2023 ಫೆಬ್ರವರಿಯಿಂದ 2024 ಫೆಬ್ರವರಿವರೆಗೆ ಕೇವಲ 95.8 ಇಂಚು ಮಳೆಯಾಗಿದೆ. ಕಳಸ ತಾಲೂಕಿನಲ್ಲಿ ಬಿಸಿಲಿನ ತಾಪದಿಂದ ನೀರಿನ ಮೂಲಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ಭದ್ರಾ ನದಿ 15 ದಿನದಿಂದ ಒಳ ಹರಿವನ್ನು ತೀರ ಕೆಳಮಟ್ಟಕ್ಕೆ ಇಳಿಸಿದೆ. ನದಿ ಒಡಲಾಳದ ಬಂಡೆಗಳು ಮೇಲೆದ್ದು ಕಾಣುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಭದ್ರಾ ನದಿ ಸಂಪೂರ್ಣ ಬತ್ತಿಹೋಗಿ ನೀರಿನ ಸಮಸ್ಯೆ ಉಂಟಾಗುವ ಸೂಚನೆ ಕಾಣುತ್ತಿದೆ.
ಇಲ್ಲಿ ಕಂಡುಬರುವ ಸುರ್‌ಮನೆ, ಕಡಂಬಿ, ಎಳನೀರು, ಹನುಮನಗುಂಡಿ ಜಲಪಾತಗಳು ನೀರಿಲ್ಲದೆ ಬರಿದಾಗುತ್ತಿವೆ. ಕುದುರೆಮುಖ ಅಭಯಾರಣ್ಯದ ಅಂಚಿನಲ್ಲಿ ಹರಿದು ಬರುತ್ತಿರುವ ಭದ್ರೆಯಲ್ಲಿ ನೀರಿನ ಅಭಾವ ಕಂಡುಬರುತ್ತಿದೆ. ಅಲ್ಲದೆ ಅಭಯಾರಣ್ಯದ ಒಳಗೂ ಸಾಕಷ್ಟು ಹಳ್ಳ, ಕೆರೆಗಳು, ಜಲಮೂಲಗಳು ಬತ್ತಿ ಹೋಗಿರುವುದರಿಂದ ಇಲ್ಲಿರುವ ಪ್ರಾಣಿ, ಪಕ್ಷಿಗಳಿಗೂ ಜಲಕಂಟಕ ಉಂಟಾಗುತ್ತಿದೆ. ಇದರಿಂದ ಕಾಡಲ್ಲಿ ಇರಬೇಕಾದ ಕಾಡುಕೋಣ, ಜಿಂಕೆ ಮುಂತಾದ ಪ್ರಾಣಿಗಳು ನೀರಿಗಾಗಿ ನಾಡಿಗೆ ಲಗ್ಗೆ ಇಡುತ್ತಿವೆ.
ಫೆಬ್ರವರಿಯಿಂದ ಏರಿದ ಬಿಸಿಲಿನ ತಾಪ ಮತ್ತು ಸೆಕೆ ನೀರಿನ ಮೂಲಗಳಿಗೆ ಕುತ್ತು ತಂದಿದೆ. ಈ ಭಾಗದಲ್ಲಿ ಗರಿಷ್ಠ 38 ಡಿಗ್ರಿವರೆಗೂ ಉಂಟಾಗುತ್ತಿರುವ ಉಷ್ಣಾಂಶದಿಂದ ನೀರು ದಿನೇ ದಿನೆ ಆವಿಯಾಗುತ್ತಿದೆ. ಮೋಡ ಕವಿದರೂ ಮಳೆ ಬಾರದ ಕಾರಣ ಎಲ್ಲೆಡೆ ನೀರಿನ ಅಭಾವ ಕಾಡಲು ಕಾರಣವಾಗಿದೆ. ನದಿ, ಹಳ್ಳ, ಕೆರೆ, ಬಾವಿಗಳ ನೀರು ಬತ್ತಿಹೋಗಿದೆ.