

ಕಿರುವಾರ ಎಸ್.ಸುದರ್ಶನ್ ಕೋಲಾರ: ನಗರದ ಕೋಲಾರಮ್ಮ ಅಮಾನಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿ ಗುತ್ತಿಗೆ ಸಂಸ್ಥೆಯು ಜಲಮೂಲದ ಸ್ವರೂಪವನ್ನೇ ಹಾಳುಗೆಡಹುವ ಆತಂಕ ಎದುರಾಗಿದ್ದು, ನಾಗರಿಕರ, ನಗರಸಭೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಡಿಪಿಆರ್ಗೆ ಅನುಮೋದನೆ ಪಡೆದುಕೊಳ್ಳದೆ ಎನ್ಜಿಒ ಆನಂದ್ ಮಲ್ಲಿಗವಾಡ್ ಫೌಂಡರ್ ಮತ್ತು ಟ್ರಸ್ಟಿ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಯು ಗುತ್ತಿಗೆ ಪಡೆದು, ಅವೈಜ್ಞಾನಿ ಕವಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ ಹಾಗೂ ಇದರಿಂದ ಜಲಮೂಲದ ಸ್ವರೂಪವೇ ನಾಶವಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ. ಈ ಬಗ್ಗೆ ನಗರಸಭೆ ಸದಸ್ಯ ಎಸ್.ಆರ್.ಮುರಳಿ ಗೌಡ ಅವರು, ಕೋಲಾರ ಅಮಾನಿಕೆರೆಯಲ್ಲಿ ಸಿಎಸ್ಆರ್ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಹೆಚ್ಚು ಮಳೆ ಬಂದು ಕೆರೆಗೆ ನೀರು ಹರಿದರೆ, ಕೆರೆಗೆ ಹೊಂದಿಕೊಂಡಿರುವ ಸುತ್ತ ಮುತ್ತಲಿನ ಬಡಾವಣೆಗಳಿಗೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಈಗಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿರುವ ಆಯೋಗದ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ವರದಿ ನೀಡುವಂತೆ ಆಯೋಗದ ವಿಲೇಖನಾಧಿಕಾರಿ, ಸಣ್ಣ ನೀರಾವರಿ ಇಲಾಖೆಯ ಬೆಂಗಳೂರಿನ ದಣ ವಲಯದ ಮುಖ್ಯ ಇಂಜಿನಿಯರ್ಗೆ ಪತ್ರ ಬರೆದಿದ್ದಾರೆ. ಅದರಂತೆ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಇಲಾಖೆಯ ಇಂಜಿನಿಯರ್ಗಳು ವಿಚಾರಣೆ ಕೈಗೊಂಡು ವರದಿ ತಯಾರಿಸಿ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆನಂದ್ ಮಲ್ಲಿಗವಾಡ್ ಫೌಂಡರ್ ಮತ್ತು ಟ್ರಸ್ಟಿ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಯವರು ಕಾಮಗಾರಿಯನ್ನು ನಿಲ್ಲಿಸಬೇಕು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುವಂತೆ, ಸೂಕ್ತ ನಿರ್ದೇಶನವನ್ನು ಸಣ್ಣ ನೀರಾವರಿ ಇಲಾಖೆಯವರ ಮೂಲಕ ನೀಡಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಟಿ ಅವರು ಆದೇಶಿಸಿದ್ದಾರೆ. ಜತೆಗೆ ಸಂಸ್ಥೆಯವರು ಡಿಪಿಆರ್ಗೆ ಅನುಮೋದನೆ ಪಡೆದುಕೊಂಡು ಕೆರೆ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಷರತ್ತುಗಳ ಪ್ರಕಾರ ಕಾಮಗಾರಿಯನ್ನು ನಡೆಸಲು ನಿರ್ದೇಶನ ನೀಡಬೇಕು ಎಂದೂ ಆದೇಶಿಸಿದ್ದಾರೆ. ವರದಿಯಲ್ಲಿ ಗುತ್ತಿಗೆ ಸಂಸ್ಥೆಯವರು ಕಾಮಗಾರಿಯಲ್ಲಿ ಮಾಡಿರುವ ಲೋಪಗಳ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಏನಿದೆ ವರದಿಯಲ್ಲಿ..?: ಆನಂದ್ ಮಲ್ಲಿಗವಾಡ್ ಫೌಂಡರ್ ಮತ್ತು ಟ್ರಸ್ಟಿ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಯವರು ವಿಭಾಗ ಕಚೇರಿಯಿಂದ ನೀಡಿದ ನಿರಾಕ್ಷೇಪಣಾ ಪತ್ರದಲ್ಲಿ ತಿಳಿಸಿರುವಂತೆ ಕ್ರಮ ವಹಿಸದೇ ಕಾಮಗಾರಿಯನ್ನು ಪ್ರಾರಂಭಿಸಿರುವುದು, ಡಿಪಿಆರ್ ಅನುಮೋದನೆ ಪಡೆದುಕೊಂಡ ನಂತರ ಕಾಮಗಾರಿ ಶುರು ಮಾಡಲು ಸೂಚಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು, ಅಮಾನಿಕೆರೆ ಸುತ್ತಲೂ
ಅವೈಜ್ಞಾನಿಕವಾಗಿ ಬಂಡ್ ನಿರ್ಮಿಸಲು ಕೆರೆಯ ಹೂಳು, ಮಣ್ಣನ್ನೇ ಉಪಯೋಗಿಸಿದ್ದರಿಂದ ಸೀಪೇಜ್ ಆಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಜಯವಾಣಿ ವರದಿ ಉಲ್ಲೇಖ: ಕೋಲಾರಮ್ಮಕೆರೆಯು ಸಣ್ಣ ನೀರಾವರಿ ಇಲಾಖೆಯ ಮಾಲೀಕತ್ವದ ವ್ಯಾಪ್ತಿಗೆ ಬರುತ್ತದೆ. ಪ್ರತಿಷ್ಠಿತ ಕಂಪನಿಯಾಗಿರುವ ಇನ್ಫೋಸಿಸ್ನಿಂದ ಸಿಎಸ್ಆರ್ ಅಡಿಯಲ್ಲಿ ಕೆರೆ ಅಭಿವೃದ್ಧಿಗಾಗಿ 17 ಕೋಟಿ ರೂ. ಬಿಡುಗಡೆಯಾಗಿದೆ. "ಡಿಪಿಆರ್ ಅನುಮೋದನೆಯಿಲ್ಲದೆ ಕಾಮಗಾರಿ..!' ಶೀರ್ಷಿಕೆಯಡಿ ನಂ&1 ದಿನಪತ್ರಿಕೆ ವಿಜಯವಾಣಿಯಲ್ಲಿ ವರದಿ ಸಹ ಪ್ರಕಟಿಸಿ, ಕಾಮಗಾರಿ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಕೆರೆ ಸಂರಕ್ಷಣಾ ಪ್ರಾಧಿಕಾರದ ಮಾನದಂಡಗಳಂತೆ ಕಾಮಗಾರಿಯನ್ನು ಡಿಪಿಆರ್ ಅನುಮೋದನೆ ಪಡೆದುಕೊಂಡ ನಂತರ ಕೆಲಸ ಮಾಡಲು ಸೂಚಿಸಿದ್ದರೂ, ಫೌಂಡೇಷನ್ನವರು ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಕಾರಣ ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು. ಆದರೂ ಗುತ್ತಿಗೆದಾರರು ರ್ನಿಲಕ್ಷ$್ಯ ತೋರಿದ್ದಾರೆ. ಸಮಕ್ಷಮ ಪ್ರಾಧಿಕಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರನಿಗೆ ಹಲವು ಬಾರಿ ನೋಟಿಸ್ಗಳನ್ನು ನೀಡಿದ್ದರೂ ಸಹ ಕ್ಯಾರೆ ಎಂದಿರಲಿಲ್ಲ. ಇದೀಗ ಮಾನವ ಹಕ್ಕುಗಳ ಅಯೋಗವು ಮಧ್ಯ ಪ್ರವೇಶಿಸಿದ್ದು, ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಆಯೋಗದ ಆದೇಶದಲ್ಲಿಯೂ ವಿಜಯವಾಣಿಯ ವರದಿಯನ್ನು ಉಲ್ಲೇಖಿಸಿದ್ದಾರೆ.
ಇಂಜನಿಯರ್ ಕಾರ್ಯ ಶೋಚನಿಯ: ಕೆರೆಯ ಸುತ್ತಲೂ ಕಟ್ಟಲಾಗಿರುವ ಬಂಡ್ಗೆ ಕೆರೆ ಹೂಳನ್ನೇ ಉಪಯೋಗಿಸಿದ್ದು, ಸೀಪೇಜ್ ಹೆಚ್ಚಾಗಿರುವುದು ಕಂಡುಬರುತ್ತದೆ. ಈ ಕಾರಣಗಳಿಂದಾಗಿ ಸಂಸ್ಥೆಯವರು ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದುದನ್ನು ಗಮನಿಸಿಯೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಶೋಚನೀಯ ಎಂದು ಆಯೋಗ ತರಾಟೆಗೆ ತೆಗೆದುಕೊಂಡಿದೆ.
ಅಮಾನಿ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಎನ್ಜಿಒ ಮಾಡುತ್ತಿದ್ದು, ನೋಟಿಸ್ಗಳನ್ನು ಕೊಟ್ಟು ಕೆಲಸ ನಿಲ್ಲಿಸಲಾಗಿದೆ. ಕೆರೆಯಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದಂತೆ, ಮಳೆಯ ನೀರನ್ನು ಶೇಖರಿಸಲು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಕೆರೆ ಸಂರಕ್ಷಣಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ವರದಿ ಸಲ್ಲಿಸಲಾಗಿದೆ. - ಹರಿಕೃಷ್ಣ ಎಇಇ, ಸಣ್ಣ ನೀರಾವರಿ ಇಲಾಖೆ. ಕೋಲಾರ. ಕೋಲಾರಮ್ಮ ಕೆರೆಯ ಸ್ವರೂಪಕ್ಕೆ ಹಾನಿ ಉಂಟು ಮಾಡಿರುವ ಸಂಬಂಧ ನಗರಸಭೆಯ ಸಾಮಾನ್ಯ ಸಭೆಯಲ್ಲೂ ವ್ಯಾಪಕ ಚರ್ಚೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಾರಂಭದಲ್ಲೇ ಎಚ್ಚೆತ್ತುಕೊಂಡಿದ್ದರೆ ನ್ಯೂನತೆಗಳನ್ನು ತಡೆಯಬಹುದಿತ್ತು. ಅಧಿಕಾರಿಗಳ ರ್ನಿಲಕ್ಷ$್ಯದಿಂದ ಗುತ್ತಿಗೆದಾರ ಅವೈಜ್ಞಾನಿಕವಾಗಿ ಕೆಲಸ ಮಾಡಿದ್ದಾನೆ. -ಎಸ್.ಆರ್.ಮುರಳಿಗೌಡ, ನಗರಸಭೆ ಸದಸ್ಯ, ಕೋಲಾರ.