

ರಾಯಚೂರು: ಖಾಸಗಿ ವಾಹಿನಿಯ ನಿರೂಪಕ ಹಾಗೂ ಪತ್ರಕರ್ತ ಅಜಿತ್ ಹನುಮಕ್ಕನವರ್ ಮುಸ್ಲಿಂ ಸಮಾಜವನ್ನು ಪಾಕಿಸ್ತಾನ್ ಧ್ವಜದೊಂದಿಗೆ ಗುರುತಿಸಿ ಮತೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡರು ದೂರಿದ್ದಾರೆ.
ಮುಖಂಡರ ನಿಯೋಗ ಸ್ಥಳೀಯ ಡಿವೈಎಸ್ಪಿ ಸತ್ಯನಾರಾಯಣಗೆ ಶನಿವಾರ ದೂರು ಸಲ್ಲಿಸಿ, ಪತ್ರಕರ್ತ ಅಜೀತ್ ಹನುಮಕ್ಕನವರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದುಗಳ ಜನಸಂಖ್ಯೆಯಲ್ಲಿ ಭಾರಿ ಇಳಿಕೆ ಹಾಗೂ ಮುಸ್ಲಿಮರ ಜನಸಂಖ್ಯೆಯಲ್ಲಿ ಏರಿಕೆ ವಿಷಯ ಕುರಿತು ವಾಹಿನಿಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ನಿರೂಪಕರಾಗಿದ್ದ ಅಜಿತ್ ಹನುಮಕ್ಕನವರ್ ಮುಸ್ಲಿಂ ಸಮುದಾಯದ ಜನಸಂಖ್ಯೆ ಏರಿಕೆ ತೋರಿಸುವ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜವನ್ನು ಬಳಸಿದ್ದಾರೆ.
ದೇಶದ ಮುಸ್ಲಿಮ ಸಮುದಾಯವನ್ನು ಪಾಕಿಸ್ತಾನದ ಜತೆಗೆ ಗುರುತಿಸಿ ಅವಮಾನ ಮಾಡಲಾಗಿದೆ. ಒಂದು ಸಮುದಾಯದ ರಾಷ್ಟ್ರೀಯ ಭಾವೈಕ್ಯತೆಗೆ ಬಾಧಕವಾಗುವಂತೆ ವಾಹಿನಿಯಲ್ಲಿ ತೋರಿಸಲಾಗಿದೆ. ಈ ಕುರಿತು ಈಗಾಗಲೇ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಸಮಾಜದ ಮುಖಂಡರಾದ ಡಾ.ರಜಾಕ್ ಉಸ್ತಾದ್, ಸೈಯದ್ ಜಾವೀದ್ ಉಲ್ ಹಕ್, ಅಬ್ದುಲ್ ಹೈ ಫಿರೋಜ್, ಸೈಯದ್ ಶಂಶುದ್ದೀನ್, ಮಹ್ಮದ್ ಉಸ್ಮಾನ್, ಸೈಯದ್ ಅಮೀನುಲ್ ಹಸನ್, ಖಾಜಾ ಮೊಹಿನುದ್ದೀನ್ ಇದ್ದರು.