

ಹೊಳೆಹೊನ್ನೂರು: ಶ್ರೀಕ್ಷೇತ್ರ ಕೂಡ್ಲಿ ಗ್ರಾಮವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿದೆ. ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದ ನಂತರ ಧರಿಸಿದ ಬಟ್ಟೆ, ಅಸ್ಥಿ ವಿಸರ್ಜನೆ ನಂತರ ತ್ಯಾಜ್ಯ ವಸ್ತುಗಳನ್ನು ಬಿಟ್ಟು ನದಿ ಪಾವಿತ್ರ್ಯ ಹಾಳು ಮಾಡಬಾರದು ಎಂದು ಪರೋಪಕಾರಂ ಕುಟುಂಬ ಸಂಸ್ಥೆ ಮುಖ್ಯಸ್ಥ ಎನ್.ಎಂ.ಶ್ರೀಧರ್ ಹೇಳಿದರು.
ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ತುಂಗಭದ್ರಾ ನದಿ ಸಂಗಮ ಸ್ಥಳದದಲ್ಲಿ ಶಿವಮೊಗ್ಗದ ಪರೋಪಕಾರಂ ಕುಟುಂಬ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು.
ಸಂಗಮ ಸ್ಥಳಕ್ಕೆ ಬರುವ ಜನರು ತೀರ್ಥಸ್ನಾನ ಮಾಡುತ್ತಾರೆ. ಆದರೆ ಅನೇಕರು ಭಕ್ತಿ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ನದಿಯಲ್ಲೇ ಬಿಟ್ಟುಹೋಗುತ್ತಾರೆ. ಇದರಿಂದ ಪ್ರತಿ ವರ್ಷ ಟನ್‌ಗಟ್ಟಲೆ ನದಿಯಲ್ಲಿ ತ್ಯಾಜ್ಯ ಸೇರಿ ನೀರು ಮಲಿನವಾಗುತ್ತಿದೆ. ಇದನ್ನು ತಡೆಗಟ್ಟಲು ಜನಜಾಗೃತಿ ಅಗತ್ಯ. ನಾವು ಪಾಲಿಸುವ ಸಂಪ್ರದಾಯಗಳು ಪರಿಸರಕ್ಕೆ ಮಾರಕ ಆಗಬಾರದು ಎಂದು ತಿಳಿಸಿದರು.
ಲೆಕ್ಕಪರಿಶೋಧಕ ಕೃಷ್ಣಮೂರ್ತಿ ಮಾತನಾಡಿ, ಬೇಸಿಗೆ ಸಮಯದಲ್ಲಿ ನದಿ ಸ್ವಚ್ಛತೆ ಮಾಡುವ ಜತೆಗೆ ನದಿಯ ಪಾವಿತ್ರ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಪರೋಪಕಾರಂ ಕುಟುಂಬ ನಿರಂತರವಾಗಿ ಪ್ರಯತ್ನಿಸುತ್ತಿದೆ. ನದಿ ಸ್ವಚ್ಛತೆಯಿಂದ ಪುಣ್ಯ ಹಾಗೂ ಉಲ್ಲಾಸ ಪ್ರಾಪ್ತಿಯಾಗುತ್ತದೆ ಎಂದರು.
ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ನ ನವ್ಯಶ್ರೀ ನಾಗೇಶ್, ಎನ್.ಎಂ.ಲೀಲಾಬಾಯಿ, ನರಪತ್ ಪಟೇಲ್, ಜಿ.ವಿ.ಪಾಂಡುರಂಗಪ್ಪ, ರಾಜಣ್ಣ, ಆರ್.ಕುಮಾರಣ್ಣ, ದೀಪಾ ಶ್ರೀಧರ್, ಶೈಲಾ ರಾಘವೇಂದ್ರ, ವಾಯುಸುತ, ದಿನೇಶ್‌ದಾಸ್ ವೈಷ್ಣವ್, ಕೃಷ್ಣಮೂರ್ತಿ, ಸಾರಥಿ ಶಿವಾನಂದ್, ಗೀತಾ ಶಿವಾನಂದ್, ಶ್ರೀಕಾಂತ್ ಹೊಳ್ಳ, ಶೈಲಜಾ ಹೊಳ್ಳ, ಮಾನ್ಯ, ವಂದನಾ, ಇತರರಿದ್ದರು.