

ಮೈಸೂರು; ಯುವ ದಸರಾ, ಯುವ ಸಂಭ್ರಮ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಾರ್ಲೆ ಡೇವಿಡ್‌ಸನ್ ಬೈಕ್ ರ‌್ಯಾಲಿ ಯುವಜನರನ್ನು ಆಕರ್ಷಿಸಿತು.
ಜಿಲ್ಲಾಡಳಿತ, ಬೆಂಗಳೂರಿನ ಟಸ್ಕರ್ ಹಾರ್ಲೆ ಡೇವಿಡ್‌ಸನ್, ಮಾಂಕ್ಸ್ ಆನ್ ಬೈಕ್ಸ್ ಸಹಕಾರದಲ್ಲಿ ವೈದ್ಯ ಡಾ.ಶುಶ್ರುತ ಗೌಡ ಅವರು ಬೈಕ್ ರ‌್ಯಾಲಿ ಆಯೋಜಿಸಿದ್ದರು.
ಚಾಮುಂಡಿಬೆಟ್ಟದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇತರರಿದ್ದರು.
ಮೈಸೂರು, ಬೆಂಗಳೂರು, ಕೊಡಗು ಜಿಲ್ಲೆಗಳಿಂದ ಬೈಕರ್ಸ್ ಭಾಗವಹಿಸಿದ್ದರು. ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಬೈಕರ್ಸ್‌ಗಳು ಅರಮನೆ ಆವರಣದಲ್ಲಿ ರ‌್ಯಾಲಿಯನ್ನು ಮುಕ್ತಾಯಗೊಳಿಸಿದರು.
ಡಾ.ಶುಶ್ರುತ್‌ಗೌಡ ಮಾತನಾಡಿ, ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಾರಿ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿದೆ. ಮಳೆಗಾಗಿ ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದರು.
ಉದ್ಯಮಿ ಜೆ.ತಿರುಮಲೇಶ್, ಕರುಣಾಕರ್, ಗಿರೀಶ್ ಆರ್.ಗೌಡ ಮುಂತಾದವರು ಭಾಗವಹಿಸಿದ್ದರು.