

ಹುಬ್ಬಳ್ಳಿ: ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಹಾಗೂ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಶಿರೂರ ಪಾರ್ಕ್‌ನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ. 25ರಂದು ಸಂಜೆ 4 ಗಂಟೆಗೆ ಹರಿವರಾಸನಂ ಶತಮಾನೋತ್ಸವ ಸಂಭ್ರಮ ಸಮಾರಂಭ ಏರ್ಪಡಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ ಹಾಗೂ ಧರ್ಮದರ್ಶಿ ಶ್ರೀ ಆನಂದ ಗುರುಸ್ವಾಮಿ ಅವರು, ಟ್ರಸ್ಟ್ ಅಧ್ಯಕ್ಷ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಅಧ್ಯಕ್ಷತೆ ವಹಿಸುವರು. ಎಸ್‌ಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ, ಟ್ರಸ್ಟ್ ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಡಾ.ಎನ್. ಜಯರಾಂ, ಡಾ.ಎಸ್.ಎನ್. ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ ಉಪಸ್ಥಿತರಿರುವರು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್‌ಸಿಗಳಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯ ಕಿಶನ್ ಬೆಳಗಾವಿ ಅತಿಥಿಗಳಾಗಿ ಆಗಮಿಸುವರು ಎಂದರು.
ಹರಿಹರಾತ್ಮಜ ಅಷ್ಟಕಂ ಸುಪ್ರಸಿದ್ಧವಾಗಿದೆ. 1975ರಲ್ಲಿ ‘ಸ್ವಾಮಿ ಅಯ್ಯಪ್ಪನ್’ ಚಲನಚಿತ್ರದ ಗೀತೆಗಳಿಗೆ ದೇವರಾಜ ಮಾಸ್ಟರ್ ರಾಗ ಸಂಯೋಜಿಸಿದ್ದರು. ಪದ್ಮಭೂಷಣ ಡಾ.ಕೆ.ಜೆ. ಯೇಸುದಾಸ ಹಾಡಿದ್ದರು. ಸ್ವಾಮಿಗಳ ಪರಮಭಕ್ತೆ ಜಾನಕಿ ಅಮ್ಮ ಈ ಗೀತೆ ಬರೆದಿದ್ದಾರೆ ಎಂದು ವಿವರಿಸಿದರು.
ಪ್ರಮುಖರಾದ ಸುದರ್ಶನ ಬಾಳಿಗ, ಸಂಜೀವ ಸುಗತೆ, ಕಾಶಿನಾಥ ಹೊಸಪೇಟೆ, ಮಲ್ಲಿಕಾರ್ಜುನ ಅನಂತಪುರ, ವೆಂಕಟೇಶ ಹೊಸಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.