

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಿಂದ ನಡೆಸಲ್ಪಡುವ ಅವಳಿ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಶೈಕ್ಷಣಿಕ ಸಮಿತಿ ರಚಿಸಲಾಗಿದೆ. ಈ ಸಮಿತಿ ಮೂಲಕ ವಿದ್ಯಾಲಯಗಳ ಸಮಗ್ರ ಪ್ರಗತಿ ಮಾಡುವ ಬಗ್ಗೆ ವಿನೂತನ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಎಸ್‌ಎಸ್‌ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಕುಕ್ಕೆ ದೇವಳ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿಗೆ ಭೇಟಿ ನೀಡಿ ಬೋಧಕರು ಮತ್ತು ಬೋಧಕೇತರರ ಜತೆ ಸೋಮವಾರ ಸಂವಾದ ನಡೆಸಿದರು.
ಪ್ರಾಚಾರ್ಯ ಸೋಮಶೇಖರ ನಾಯಕ್ ಅವರು ಬೋಧಕ ಮತ್ತು ಬೋಧಕೇತರರಿಗೆ ವೇತನ ನಿಗದಿಪಡಿಸುವ ಬಗ್ಗೆ ಸೇರಿದಂತೆ ಇತರ ಬೇಡಿಕೆಗಳನ್ನು ಸಲ್ಲಿಸಿದರು. ಬಳಿಕ ಬೋಧಕ- ಬೋಧಕೇತರರೊಂದಿಗೆ ಆಡಳಿತ ಮಂಡಳಿ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿತು.
ಕುಕ್ಕೆ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಮಾಜಿ ಸದಸ್ಯ ಶಿವರಾಮ ರೈ, ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್ ಉಪಸ್ಥಿತರಿದ್ದರು.
ಬೇಡಿಕೆಗಳ ಈಡೇರಿಕೆ ಚರ್ಚೆ
ವೇತನ ನೀಡಿಕೆ, ಸಂಸ್ಥೆಗೆ ಆವರಣ ಗೋಡೆ, ಸ್ವಾಗತ ಗೋಪುರ, ಇಂಟರ್‌ಲಾಕ್ ಅಳವಡಿಕೆ, ವಿದ್ಯಾರ್ಥಿಗಳಿಗೆ ದೇವಳದಿಂದ ಸಮವಸ್ತ್ರ ನೀಡಿಕೆ, ಮೂಲಸೌಕರ್ಯ ಹೊಂದಿದ ಕಾಲೇಜು ಕಟ್ಟಡ, ಬೆಳಗ್ಗಿನ ಉಪಹಾರ, ಗಣಕಯಂತ್ರ ನೀಡಿಕೆ, ಕಟ್ಟಡಗಳ ಪುನಃ ನಿರ್ಮಾಣ, ಬೆಳ್ಳಿಹಬ್ಬ ಕಟ್ಟಡ ವಿಸ್ತರಣೆ, ರಂಗ ಮಂದಿರ ನಿರ್ಮಾಣ, ಪೀಠೋಪಕರಣ, ಬಸ್ಸಿನ ವ್ಯವಸ್ಥೆ, ವಿದ್ಯಾರ್ಥಿ ನಿಲಯ ನಿರ್ಮಾಣ ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ವಿದ್ಯಾಸಂಸ್ಥೆಗೆ ಪೂರಕವಾದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶೈಕ್ಷಣಿಕ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಹೇಳಿದರು.