

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದ ಹರಿಹರ ತಾಲೂಕಿನ ಕೊನೇ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಶಾಸಕ ಬಿ.ಪಿ. ಹರೀಶ್ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಮಲೆಬೆನ್ನೂರಿನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಲಾಶಯದಿಂದ ನೀರು ಹರಿಸಿ ಒಂದೂವರೆ ತಿಂಗಳು ಕಳೆದರೂ ಕೊನೇ ಭಾಗಕ್ಕೆ ಏಕೆ ತಲುಪಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಎಇಇ ಧನಂಜಯ್ ಇಂಜಿನಿಯರ್ ಕೊರತೆ ಇದೆ. ಬಸವಾಪಟ್ಟಣಕ್ಕೆ ಇಬ್ಬರು ಹಾಗೂ ಮಲೆಬೆನ್ನೂರು ಉಪ ವಿಭಾಗಕ್ಕೆ ಒಬ್ಬರು ಇಂಜಿನಿಯರ್ ಇದ್ದಾರೆ. ಅದರಲ್ಲೂ ರಾತ್ರಿ, ಹಗಲು ಎನ್ನದೆ ಕಷ್ಟಪಟ್ಟು ಕೊನೇ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಂತರ ಶಾಸಕರು ಎಸ್ಇ ರವಿಚಂದ್ರನ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ಕೊನೆಯ ಭಾಗಕ್ಕೆ 45 ದಿನಗಳಾದರೂ ನೀರು ತಲುಪಿಲ್ಲ. ರೈತರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಭದ್ರಾ ಅಚ್ಚುಕಟ್ಟು ಮೇಲ್ಭಾಗದ ಅಕ್ರಮ ಪಂಪ್ಸೆಟ್ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಪ್ರಕಟಣೆ ಹೊರಡಿಸುತ್ತಾರೆ. ಆದರೆ ಇದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ದೂರಿದರು.
ಜಲಾಶಯ ಭರ್ತಿಯಾಗಿದ್ದರೂ ಹರಿಹರ ತಾಲೂಕಿನ ಕೊನೇ ಭಾಗದ ರೈತರಿಗೆ ನೀರು ಬರುತ್ತಿಲ್ಲ. ಅಕ್ರಮ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಗಮನ ಹರಿಸಬೇಕು ಎಂದರು.
ಹೊಳೆಸಿರಿಗೆರೆ ರೈತ ಪ್ರಭು ಮಾತನಾಡಿ, ಕೊನೆಯ ಭಾಗಕ್ಕೆ ನೀರು ಹರಿಸದಿದ್ದರೆ ಬರುವ ಗುರುವಾರ ಹೊಳೆಸಿರಿಗೆರೆಯಲ್ಲಿ ರೈತರ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ರೈತ ಮುಖಂಡರಾದ ಜಿಗಳಿ ಹನುಮಗೌಡ, ಚಂದ್ರಪ್ಪ , ವೀರೇಶ ಸ್ವಾಮಿ, ಸಿರಿಗೆರೆ ರಂಗನಾಥ್, ಚಿದಾನಂದ, ಭೋವಿ ಮಂಜಣ್ಣ , ಆನಂದ್, ಓ.ಜಿ. ಮಂಜುನಾಥ್, ರಂಗಣ್ಣ ಇತರರಿದ್ದರು.
ಸಿಬ್ಬಂದಿ ಕೊರತೆ: ಬಸವಾಪಟ್ಟಣ ವಿಭಾಗದಲ್ಲಿ ಸಿಬ್ಬಂದಿ ಇಲ್ಲ. ಹೀಗಾಗಿ ಕೊನೇ ಭಾಗಕ್ಕೆ ನೀರು ತಲುಪಿಲ್ಲ ಎಂದು ಎಇಇ ಧನಂಜಯ ಸ್ಪಷ್ಟನೆ ನೀಡಿದರು. ನಿಗದಿತ ಪ್ರಮಾಣದಲ್ಲಿ ನೀರು ಬರದಿದ್ದರೆ ಕೊನೇ ಭಾಗಕ್ಕೆ ತಲುಪಿಸುವುದು ಅಸಾಧ್ಯ. ಉಪ ವಿಭಾಗದಲ್ಲಿ ಒಬ್ಬನೇ ಕೆಲಸ ಮಾಡುತ್ತಿದ್ದೇನೆ ಎಂದು ಎಇಇ ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಭದ್ರಾ ನಾಲೆ ಡಿ.ಬಿ.ಕೆರೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಭಾಗದಲ್ಲಿ ನೀರಾವರಿ ಕಟ್ಟಡ ಹಾಗೂ ನಾಲೆಯ ಗೇಟ್ಗಳು ಹಾಳಾಗಿವೆ. ಹೀಗಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ ಎಂದು ವಿವರಿಸಿದರು.