ಹರೀಶ್ ಬಂಗೇರ ಹೆಸರಲ್ಲಿ ನಕಲಿ ಪೋಸ್ಟ್, ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್

Facebook
Published on

ಉಡುಪಿ: ಸೌದಿ ದೊರೆ ಹಾಗೂ ಮೆಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಸೌದಿಯಲ್ಲಿ ಬಂಧಿತರಾದ ಕೋಟೇಶ್ವರದ ಬೀಜಾಡಿ ಗ್ರಾಮದ ಹರೀಶ್ ಬಂಗೇರ(32) ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಲಯಕ್ಕೆ ದೋಷರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದರು.

ಹರೀಶ್ ಬಂಗೇರರ ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸೆನ್ ಪೊಲೀಸರು, ಮೂಡಬಿದಿರೆಯ ಸಹೋದರರಾದ ಅಬ್ದುಲ್ ಹುಯೇಸ್ ಹಾಗೂ ಅಬ್ದುಲ್ ತುವೇಸ್ ಎಂಬವರನ್ನು ಜೂನ್ ತಿಂಗಳಲ್ಲಿ ಬಂಧಿಸಿದ್ದಾರೆ. ಈಗ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತಾಂತ್ರಿಕ ಮಾಹಿತಿ ಮತ್ತು ಆರೋಪಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಮಾಯಕ ಹರೀಶ್ ಬಂಗೇರರನ್ನು ಸೌದಿಯ ಜೈಲಿನಿಂದ ಬಿಡುಗಡೆಗೊಳಿಸಿ ಕರೆ ತರಲು ಸರ್ಕಾರದ ಮೂಲಕ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net