

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಹಾಗೂ ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ
ಡಾ. ಎಸ್.ಆರ್.ಹರೀಶ್ ಆಚಾರ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಆಗಸ್ಟ್ 12 ರಿಂದ ಪದವಿ ತರಗತಿಗಳು ಪ್ರಾರಂಭವಾಗಿದ್ದರೂ ಅತಿಥಿ ಉಪನ್ಯಾಸಕರ ನೇಮಕಾತಿಯಾಗದೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ನಷ್ಟವಾಗಿದೆ. ಖಾಸಗಿ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ಸಹಜವಾಗಿ ನಡೆಯುತ್ತಿದ್ದು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತೀವ್ರ ಆತಂಕಿತರಾಗಿದ್ದಾರೆ. ಸರ್ಕಾರ ತಕ್ಷಣ ಉಪನ್ಯಾಸಕರ ನೇಮಕಾತಿಗೆ ಮಾಡುವುದರೊಂದಿಗೆ ನಷ್ಟ ಹೊಂದಿದ ಸುಮಾರು 45 ದಿನಗಳ ಶೈಕ್ಷಣಿಕ ಕಾರ್ಯಗಳನ್ನು ಸರಿದೂಗಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.
ಒಂದು ಸೆಮಿಸ್ಟರ್ ನ ಸುಮಾರು 90 ಶೈಕ್ಷಣಿಕ ದಿನಗಳಲ್ಲಿ 45ರಷ್ಟು ದಿನಗಳ ಶೈಕ್ಷಣಿಕ ಕಾರ್ಯದ ನಷ್ಟವನ್ನು ಸರಿದೂಗಿಸುವುದು ಸುಲಭದ ಸಂಗತಿಯಲ್ಲ. ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಈ ರೀತಿ ಅತಿಥಿ ಉಪನ್ಯಾಸಕರ ನೇಮಕಾತಿಯಾಗದೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ನಷ್ಟವನ್ನು ಅನುಭವಿಸಿದ್ದರು. ಇದು ಶಿಕ್ಷಣ ಇಲಾಖೆಯ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿ ಎಂದು ಡಾ. ಎಸ್.ಆರ್.ಹರೀಶ್ ಆಚಾರ್ಯ ತಿಳಿಸಿದ್ದಾರೆ.