

ಮಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಾರಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಕೈಬಿಟ್ಟ ಪಠ್ಯದಿಂದಲೇ ಪ್ರಶ್ನೆಗಳು ಬಂದಿರುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಎಲ್ಲ ನಾಲ್ಕು ಪರೀಕ್ಷೆಗಳ ವಿಷಯಗಳಲ್ಲಿ ಪಠ್ಯದಿಂದ ಹೊರತಾದ ಪ್ರಶ್ನೆಗಳು ಬಂದಿರುವುದನ್ನು ಕಂಡಾಗ ಯಾವುದೋ ದುರುದ್ದೇಶದಿಂದ ಕೂಡಿದ ಗಂಭೀರವಾದ ಕಾರಣಗಳು ಅಡಗಿರುವ ಸಾಧ್ಯತೆಗಳು ಇದೆ. ರಾಜ್ಯ ಸರ್ಕಾರ ತಕ್ಷಣವೇ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಿ ವಿದ್ಯಾರ್ಥಿಗಳು, ಶೈಕ್ಷಣಿಕ ವ್ಯವಸ್ಥೆ ಮತ್ತು ಸಾರ್ವಜನಿಕರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಸ್ ಆರ್ ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.