

ಮಂಗಳೂರು : ಅನುದಾನಿತ ಶಾಲಾ ಶಿಕ್ಷಕರಿಗೂ ಹಳೇ ಪಿಂಚಣಿ ಸೌಲಭ್ಯ ವಿಸ್ತರಣೆ ಮಾಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್.ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.
ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಸೌಲಭ್ಯವನ್ನು 2006ರ ಏಪ್ರಿಲ್ 1ರ ಪೂರ್ವದಲ್ಲಿ ಅಧಿಸೂಚಿತಗೊಂಡು ನಂತರ
ನೇಮಕಾತಿ ಪಡೆದ ಎಲ್ಲ ಸರ್ಕಾರಿ ನೌಕರರಿಗೆ ಅನ್ವಯಗೊಳಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ
ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಈ ಸೌಲಭ್ಯ ವಿಸ್ತರಿಸಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಅನುದಾನಿತ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವರು ಹೇಳಿದ್ದಾರೆ.
ಹಳೆಯ ಪಿಂಚಣಿ ವ್ಯವಸ್ಥೆಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಅರ್ಹ ಶಿಕ್ಷಕರು ಇದ್ದಾರೆ. 2006ರ ಏಪ್ರಿಲ್1ರ ಪೂರ್ವದಿಂದಲೇ ಸೇವೆಯಲ್ಲಿದ್ದು ಬಳಿಕ ಅನುದಾನಕ್ಕೊಳಪಟ್ಟ ಶಿಕ್ಷಕರು ಸಹಜವಾಗಿ ಹಳೇ ಪಿಂಚಣಿ ವ್ಯವಸ್ಥೆಗೆ ಅರ್ಹತೆ ಹೊಂದಿದ್ದಾರೆ. ಅದೇ ರೀತಿ ನಿಗದಿಪಡಿಸಿದ ದಿನಾಂಕದ ಪೂರ್ವದಿಂದಲೇ ಹಲವಾರು ಖಾಸಗಿ ಅನುದಾನಿತ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಜಾರಿಯಲ್ಲಿದ್ದು ನಂತರ ನೇಮಕಾತಿ ಹೊಂದಿದ ಅರ್ಹ ಶಿಕ್ಷಕರೂ ಇದ್ದಾರೆ. ಇಂತಹ ಶಿಕ್ಷಕರು ಹಳೇ ಪಿಂಚಣಿ ವ್ಯವಸ್ಥೆಗೆ ಸಹಜವಾಗಿ ಅರ್ಹತೆ ಉಳ್ಳವರಾಗಿದ್ದಾರೆ. ಇದು ಸರ್ಕಾರಕ್ಕೆ ಹೆಚ್ಚು ವೆಚ್ಚದಾಯಕವೂ ಅಲ್ಲ. ಅದುದರಿಂದ ಅಂತವರಿಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನ್ವಯಿಸಿ ಎಲ್ಲರಿಗೂ ಸಹಜ ನ್ಯಾಯವನ್ನು ಕಲ್ಪಿಸುವ ತತ್ವವನ್ನು ಸರ್ಕಾರ ಪಾಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.