ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯ ನಡೆಸಿ -ಎಸ್.ಆರ್.ಹರೀಶ್ ಆಚಾರ್ಯ ಆಗ್ರಹ

mng-13jan-harisha acharya
Published on



ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳಗಂಗೋತ್ರಿಯ ಕೊಣಾಜೆ ಕ್ಯಾಂಪಸ್‌ನಲ್ಲಿ ಈ ಸಾಲಿನ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ನಡೆಸಲು ಉದ್ದೇಶಿಸಿರುವುದು ಸರಿಯಲ್ಲ. ವಿಶ್ವವಿದ್ಯಾನಿಲಯವು ಮೌಲ್ಯಮಾಪನ ಕಾರ್ಯವನ್ನು ತಾನು ಅಳವಡಿಸಿಕೊಂಡಿರುವ ನೀತಿ ನಿಯಮಗಳಡಿಯಲ್ಲಿಯೇ ನಡೆಸಬೇಕು ಮತ್ತು ಮಂಗಳೂರು ನಗರದ
ಯಾವುದಾದರೂ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿ.ವಿ. ಮಾಜಿ ಸಿಂಡಿಕೇಟ್ ಸದಸ್ಯಎಸ್.ಆರ್.ಹರೀಶ್ ಆಚಾರ್ಯ ಅವರು ಕುಲಪತಿಗಳನ್ನು ಒತ್ತಾಯಿಸಿದ್ದಾರೆ.
ಮೌಲ್ಯಮಾಪಕ ಅಧ್ಯಾಪಕರು ತಮಗೆ ಸಮಯವಕಾಶ ಸಿಕ್ಕಾಗ ಕೊಣಾಜೆಗೆ ಬಂದು ಮೌಲ್ಯಮಾಪನ ಕಾರ್ಯ ಕೈಗೊಳ್ಳಬೇಕು ಎಂದು ವಿ.ವಿ.ತೀರ್ಮಾನಿಸಿದೆ. ಮೌಲ್ಯಮಾಪನ ಕಾರ್ಯವು ಪರೀಕ್ಷಾ ಮಂಡಳಿಯ ಅಧ್ಯಕ್ಷರ ಕಡ್ಡಾಯ ಉಪಸ್ಥಿತಿಯಲ್ಲಿ ಹಾಗೂ ವಿಷಯವಾರು ಮುಖ್ಯಸ್ಥರು ಮತ್ತು ಉಪ ಮುಖ್ಯಸ್ಥರ ನೇರ ಹೊಣೆಗಾರಿಕೆಯ ನಿಯಂತ್ರಣದಲ್ಲಿ ನಡೆಯಬೇಕು ಎಂಬುದು ಮೌಲ್ಯಮಾಪನ ನೀತಿಯಾಗಿದೆ. ಅಲ್ಲದೆ ಈ ಮೌಲ್ಯಮಾಪನ ಕಾರ್ಯವು ನಿರಂತರತೆಯಿಂದ ಕೂಡಿರಬೇಕು. ಅಧ್ಯಾಪಕರು ತಮ್ಮ ತಮ್ಮ ಸಮಯವಕಾಶದಂತೆ ಮೌಲ್ಯಮಾಪನ ಕಾರ್ಯ ಮಾಡಿದರೆ ಇದೆಲ್ಲಾ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ವಿವಿಯ ಮೌಲ್ಯಮಾಪನಾ ಪ್ರಕ್ರಿಯೆಯು ತನ್ನದೇ ಆದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಹೊಂದಿದೆ. ಆದರೆ ತಮ್ಮ ಮೂಗಿನ ನೇರಕ್ಕೆ ಬೇಕಾದಂತೆ ಮೌಲ್ಯಮಾಪನ ನೀತಿಯನ್ನು ಬದಲಾಯಿಸುವುದರಿಂದ ವಿಶ್ವವಿದ್ಯಾನಿಲಯದ ಮಹತ್ವ ಮತ್ತು ಅದರ ಘನತೆಗೆ ಕುಂದುಂಟಾಗುತ್ತದೆ .ತಕ್ಷಣವೇ ಮಂಗಳೂರು ವಿಶ್ವವಿದ್ಯಾನಿಲಯವು ಉದ್ದೇಶಿತ ಈ ಪ್ರಸ್ತಾವಣೆಯನ್ನು ಕೈಬಿಟ್ಟು ಮಂಗಳೂರು ನಗರದ ಯಾವುದಾದರೂ ಕಾಲೇಜಿನಲ್ಲಿ ಈ ಸಾಲಿನ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net