ಸೇಬು ಬೆಳೆದು ಸೈ ಎನಿಸಿಕೊಂಡ ಹರಿಪ್ರಸಾದ್

01-bidadi-1
Published on

* ಬರಗಾಲದಲ್ಲೂ ಬರಪೂರ ಸಲು ಬೆಳೆದ ಕೃಷಿಕ

* ತಾಯಪ್ಪನದೊಡ್ಡಿ ಗ್ರಾಮದಲ್ಲಿ ಮಾದರಿ ರೈತ

* ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ

ಚೇತನ್ ಚಕ್ಕೆರೆ ಬಿಡದಿ

ಸೇಬು ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಪ್ರತಿದಿನ ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರೂ ಹೇಳುತ್ತಾರೆ. ಸೇಬು ಸಮಶೀತೋಷ್ಣ ವಲಯದ ಬೆಳೆ. ಸಾಮಾನ್ಯವಾಗಿ ಕಾಶ್ಮೀರದಲ್ಲಿ ಈ ರಸಭರಿತ ಹಣ್ಣನ್ನು ಬೆಳೆಯಲಾಗುತ್ತದೆ. ಆದರೆ, ಈಗ ಮಳೆ ಆಶ್ರಿತ ಪ್ರದೇಶದಲ್ಲೂ ಸೇಬು ಬೆಳೆಯಬಹುದು ಎನ್ನುವುದನ್ನು ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿದ್ದಾರೆ.

ಹೌದು. ಬಿಡದಿ ಹೋಬಳಿಯ ತಾಯಪ್ಪನದೊಡ್ಡಿ ಗ್ರಾಮದಲ್ಲಿ ರೈತ ಹರಿಪ್ರಸಾದ್, ಕಾಶ್ಮೀರದಲ್ಲಷ್ಟೇ ಅಲ್ಲದೆ ಜಿಲ್ಲೆಯಲ್ಲೂ ಬೆಳೆದು ತೋರಿಸಬೇಕೆಂದು ನಿರ್ಧಾರ ಮಾಡಿ ಈಗ ಸೇಬು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಎರಡು ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಬೇಸಾಯ ಮಾಡುತ್ತಿದ್ದಾರೆ. ಸಾವಯವ ಪದ್ಧತಿಯಡಿ ಬೆಳೆ ನಾಟಿ ಮಾಡಿ ಮೊದಲ ಫಸಲು ಪಡೆದು ಭೇಷ್ ಎನಿಸಿಕೊಂಡಿದ್ದಾರೆ.

ಕಾಶ್ಮಿರದ ಹವಾಗುಣಕ್ಕೆ ಹೆಚ್ಚು ಸಮೃದ್ಧವಾಗಿ ಬೆಳೆಯುವ ಸೇಬನ್ನು ಹರಿಪ್ರಸಾದ್, ಮಳೆಯಾಶ್ರಿತ ಹಾಗೂ ಮರಳು ಮಿಶ್ರಿತ ಭೂಮಿಯಲ್ಲೂ ಬೆಳೆದಿದ್ದು, ಇದಕ್ಕಾಗಿ ಹೆಚ್ಚೆನೂ ಕಷ್ಟಪಡದ ಇವರು, ಶ್ರದ್ಧೆಯಿಂದ ಫಲ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ಗಿಡಕ್ಕೂ ಸ್ವಲ್ಪ ದನದ ಸಗಣಿ ಹಾಕಿದ್ದು ಬಿಟ್ಟರೆ ಮತ್ತೆನನ್ನೂ ಬಳಸದೆ ಉತ್ತಮ ಫಲ ಪಡೆದಿದ್ದಾರೆ. ಕಾಶ್ಮಿರ ಬಿಟ್ಟರೆ ಬೇರೆಲ್ಲೂ ಬೆಳೆ ಸರಿಯಾಗಿ ಬರುವುದಿಲ್ಲ ಎಂದುಕೊಂಡಿದ್ದವರೇ ಹೆಚ್ಚು. ಇದನ್ನು ಸವಾಲಾಗಿ ಸ್ವೀಕರಿಸಿ, ಎಲ್ಲರೂ ಅಚ್ಚರಿಪಡುವಂತೆ ಹೊಲದಲ್ಲಿ ಸೇಬು ಬೆಳೆದಿದ್ದಾರೆ.

ಸೇಬು ಬೆಳೆಸುವುದಕ್ಕೆ ನಿರ್ವಹಣೆ ವೆಚ್ಚ, ನೀರಿನ ಬಳಕೆಯೂ ಕಡಿಮೆ ಎನ್ನುತ್ತಾರೆ ಹರಿಪ್ರಸಾದ್. ಹಿಮಾಚಲ ಪ್ರದೇಶದಿಂದ ಎರಡು ವರ್ಷದ ಹಿಂದೆ ಸುಮಾರು 50 ಗಿಡಗಳನ್ನು ತರಿಸಿ ನೆಡಲಾಗಿತ್ತು.

ಗಿಡದಿಂದ ಗಿಡಕ್ಕೆ 10 ಅಡಿ ಅಗಲ ಹಾಗೂ ಉದ್ದದ ವಿಸ್ತೀರ್ಣದಲ್ಲಿ ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಎಚ್.ಆರ್.ಎನ್-99, ಅಣ್ಣಾ, ಗೋಲ್ಡನ್ ಟಾಕ್ಸೆಂಟ್ ಎಂಬ ಮೂರು ತಳಿಗಳ ಗಿಡಗಳನ್ನು ಬೆಳೆಸಿದ್ದಾರೆ. ಫೆಬ್ರವರಿಯಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತದೆ. ಎಷ್ಟೇ ಉಷ್ಣತೆ ಇದ್ದರೂ ಈ ಗಿಡಗಳು ತಡೆದುಕೊಳ್ಳುತ್ತವೆ. ಈಗ ಮರಕ್ಕೆ 4-5 ಹಣ್ಣು ಬಿಟ್ಟಿದ್ದು, ಮುಂದಿನ ವರ್ಷ ಹೆಚ್ಚಿನ ಫಸಲಿನ ನಿರೀಕ್ಷೆ ಇದೆ.

ಬಾಗಲಕೋಟೆಯ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಅವರು ಅವರ ಜಮೀನಿನಲ್ಲಿ ಸೇಬಿನ ಗಿಡಗಳನ್ನು ನೆಟ್ಟಿದ್ದರು. ಇದನ್ನು ನೋಡಿದ ಹರಿಪ್ರಸಾದ್ ಕೂಡ ಅದನ್ನೇ ಮಾದರಿಯಾಗಿ ತೆಗೆದುಕೊಂಡು ಜಮೀನಿನಲ್ಲಿ ನೆಡಲು ಮನಸ್ಸು ಮಾಡಿದ್ದರು.

ಸಮಗ್ರ ಕೃಷಿಗೆ ಹೆಚ್ಚಿನ ಒತ್ತು

ರೈತ ಹರಿಪ್ರಸಾದ್ ಎರಡು ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಕೊಟ್ಟಿಗೆ ಗೊಬ್ಬರವನ್ನಷ್ಟೆ ಬಳಸುತ್ತಿದ್ದಾರೆ. ಇಲ್ಲೇ ಮಾವಿನ ಗಿಡಗಳನ್ನು ನೆಡಲಾಗಿದೆ. ಕೇಸರ್ ಹಾಗೂ ಆಪೂಸ್ ತಳಿಯ ಮಾವಿನ ಗಿಡಗಳಿದ್ದು, 4 ಅಡಿ ಉದ್ದ 4 ಅಡಿ ಅಗಲದ ಅಂತರದಲ್ಲಿ ಗಿಡಗಳನ್ನು ವೈಜ್ಞಾನಿಕವಾಗಿ ನೆಟ್ಟು ಫಸಲು ಪಡೆಯುತ್ತಿದ್ದಾರೆ. ಇದರ ಜತೆಗೆ ರೇಷ್ಮೆ ಹಾಗೂ ರಾಗಿಯನ್ನೂ ಬೆಳೆದಿದ್ದಾರೆ.

ವ್ಯವಸಾಯ ಮಾಡುವುದು ಒಂದು ಕಲೆ. ಯಾವುದೇ ಬೆಳೆ ಬೆಳೆದರೂ ಸರಿ ವೈಜ್ಞಾನಿಕವಾಗಿ ಬೆಳೆದರೆ ನಷ್ಟ ಉಂಟಾಗುವುದಿಲ್ಲ. ಮೊದಲಿಗೆ ಸೇಬು ಬೆಳೆಯುವ ಮುನ್ನ ಆಲೋಚನೆ ಮಾಡಿ ಹಲವರ ಸಲಹೆ ಪಡೆದು ಸೇಬಿನ ಗಿಡಗಳನ್ನು ತಂದು ಜಮೀನಿನಲ್ಲಿ ನೆಟ್ಟಿ ಫಸಲು ನೋಡುತ್ತಿದ್ದೇನೆ. ಮುಂದೆ ಈ ಗಿಡಗಳು ಇನ್ನಷ್ಟು ಬೆಳೆದು ನಮಗೆ ಉತ್ತಮ ಆದಾಯ ತಂದು ಕೊಡಲಿವೆ. ಹರಿಪ್ರಸಾದ್, ರೈತ

ಸಂಪರ್ಕ

ಮೊಬೈಲ್ ಸಂಖ್ಯೆ: 9448808800

ಸಮಯ:

ಬೆಳಗ್ಗೆ 10ರಿಂದ

ರಾತ್ರಿ 9 ಗಂಟೆವರೆಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net