ರಾಹುಲ್ ಗಾಂಧಿ ದಲಿತರ ಕ್ಷಮೆ ಯಾಚಿಸಲಿ : ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಆಗ್ರಹ

download
Published on



ಮಂಗಳೂರು : ಅಮೆರಿಕದಲ್ಲಿ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಕ್ತ ಸಂದರ್ಭ ಬಂದಾಗ ಮೀಸಲಾತಿಯನ್ನು ತೆಗೆದುಹಾಕುವುದಾಗಿ ಪ್ರತಿಪಾದಿಸಿದ್ದಾರೆ. ಇದರಿಂದ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ. ರಾಹುಲ್ ಗಾಂಧಿ ಕೋಟ್ಯಾಂತರ ದಲಿತರ ಮತ್ತು ಹಿಂದುಳಿದ ವರ್ಗದವರ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಜನಜಾಗೃತಿ ಹೋರಾಟ ನಡೆಸಲಿದೆ’ಎಂದರು.
ನೆಹರು ಕಾಲದಲ್ಲೇ ಕಾಂಗ್ರೆಸ್ ಮೀಸಲಾತಿಗೆ ವಿರುದ್ಧವಾಗಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿ ದಕ್ಷತೆಗಾಗಿ ಮೀಸಲಾತಿ ವಿರೋಧಿಸುವುದಾಗಿ ನೆಹರು ಪ್ರತಿಪಾದಿಸಿದ್ದರು. ಈಗ ಅವರ ಮರಿಮೊಮ್ಮಗ ಅದೇ ರಾಗದಲ್ಲಿ ಮಾತಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಮೀಸಲಾತಿ ರದ್ದುಗೊಳಿಸುವ ರಾಹುಲ್ ಗಾಂಧಿ ಸಂಕಲ್ಪವನ್ನು ಈಡೇರಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ವಿದೇಶ ಪ್ರವಾಸ ಸಂದರ್ಭ ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿ ಅವರಿಗೆ ಅಭ್ಯಾಸವಾಗಿದೆ. ದೇಶದ್ರೋಹಿಗಳನ್ನು , ನಕ್ಸಲರನ್ನು, ಮತಾಂಧ ಭಯೋತ್ಪಾದಕರನ್ನು ದೇಶದ ಒಳಗೆ ಮತ್ತು ಹೊರಗೆ ಬೆಂಬಲಿಸುವ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಕಾರ್ಯವನ್ನು ರಾಹುಲ್ ಗಾಂಧಿ ನೇರವಾಗಿ ಮಾಡುತ್ತಿದ್ದಾರೆ. ಮಾತು ಎತ್ತಿದರೆ ಸಂವಿಧಾನದ ಪ್ರತಿ ತೋರಿಸುವ ರಾಹುಲ್ ಗಾಂಧಿ ಅವರ ಇತ್ತೀಚಿನ ನಡವಳಿಕೆ ದೇಶದ ಜನರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಕೋಣೆಮನೆ ಹೇಳಿದರು.
ವಿದೇಶಿಯರಲ್ಲಿ ಭಾರತದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ತನ್ನ ಹಳೇ ಚಾಳಿಯನ್ನು ರಾಹುಲ್ ಗಾಂಧಿ ಮುಂದುವರಿಸಿದ್ದಾರೆ. ಓರ್ವ ಖಾಲಿಸ್ತಾನ ಪ್ರತ್ಯೇಕವಾದಿ ಹಾಗೂ ಓರ್ವ ಭಾರತ ವಿರೋಧಿ ಮಹಿಳೆಯ ಮಧ್ಯೆ ಕುಳಿತು ಅಮೆರಿಕದಲ್ಲಿ ಸುದ್ದಿಗೋಷ್ಠಿ ನಡೆಸುವ ರಾಹುಲ್ ಗಾಂಧಿ ಯಾರ ಎಜೆಂಟ್ ಎಂದು ಪ್ರಶ್ನಿಸಬೇಕಾಗಿದೆ. ಜಮ್ಮುಕಾಶ್ಮೀರ ಚುನಾವಣೆಯಲ್ಲಿ ಉಗ್ರಗಾಮಿಗಳನ್ನು ಬೆಂಬಲಿಸುವ ಪಕ್ಷದೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಮೋದಿ ಸರ್ಕಾರ 370ನೇ ವಿಧಿ ರದ್ದು ಪಡಿಸಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ದೇಶದ ಜನತೆ ಎಲ್ಲವನ್ನೂ ಅರ್ಥ ಮಾಡುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭ ಮತಾಂಧರು ವ್ಯಾಪಕ ಹಿಂಸಾಚಾರ ನಡೆಸಿದ್ದರೂ ರಾಜ್ಯದ ಗೃಹ ಮಂತ್ರಿ ಇದು ಸಣ್ಣ ಘಟನೆ ಎಂದು ಹೇಳುತ್ತಿದ್ದಾರೆ. ಗಣೇಶ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಎಸೆದವರ ಬದಲು ಗಣೇಶೋತ್ಸವ ನಡೆಸಿದ ಹಿಂದು ಯುವಕರನ್ನು ಬಂಧಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಹಿಂದುಗಳು ಭಯಭೀತರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ವಿಧಾನ ಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಾ ? ಮುಸ್ಲಿಂ ಲೀಗ್-ಎಸ್‌ಡಿಪಿಐ ಸರ್ಕಾರ ಇದೆಯಾ ಎನ್ನುವ ಅನುಮಾನ ಮೂಡಿದೆ . ಹಿಂದುಗಳ ಮೇಲಿನ ಹಲ್ಲೆ ವಿರೋಧಿಸಿ ಬಿಜೆಪಿ ಪ್ರತಿ ತಾಲೂಕಿನಲ್ಲಿ ಹೋರಾಟ ನಡೆಸಲಿದೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ‌್ವಾರ, ಪ್ರಮುಖರಾದ ಸತೀಶ್ ಪ್ರಭು, ರಾಜ್‌ಗೋಪಾಲ್ ರೈ, ಮನೋಹರ ಶೆಟ್ಟಿ, ವಸಂತ.ಜೆ.ಪೂಜಾರಿ, ಅರುಣ್.ಜಿ.ಶೇಟ್, ಕೆ.ಆರ್.ಮೋಹನ್ ರಾಜ್, ರತನ್ ರಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net