ಹರಿನಾರಾಯಣ ಬೈಪಡಿತ್ತಾಯರಿಗೆ ಕಡಬ ಸಂಸ್ಮರಣಾ ಪ್ರಶಸ್ತಿ

harinarayana new
Published on

ಮಂಗಳೂರು: ಯಕ್ಷಗಾನ ಹಿಮ್ಮೇಳ ವಾದಕ ಕಡಬ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಕಡಬ ವಿನಯ ಆಚಾರ್ಯ ನೆನಪಿನಲ್ಲಿ ‘ಕಡಬ ಸಂಸ್ಮರಣಾ ಸಮಿತಿ’ ನೀಡುವ ‘ಕಡಬ ಸಂಸ್ಮರಣಾ ಪ್ರಶಸ್ತಿ- 2020’ಕ್ಕೆ ದಿ.ನಾರಾಯಣ ಆಚಾರ್ಯ ಅವರ ಗುರುಗಳಾದ ಹಿರಿಯ ಮದ್ದಳೆಗಾರ ಹರಿನಾರಾಯಣ ಬೈಪಡಿತ್ತಾಯ ಆಯ್ಕೆಯಾಗಿದ್ದಾರೆ.

ಪ್ರಥಮ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಡಿ.6ರಂದು ಮಧ್ಯಾಹ್ನ 2.30ಕ್ಕೆ ನಗರದ ನಮ್ಮ ಕುಡ್ಲ ಟಿವಿ ಚಾನೆಲ್ ಸ್ಟುಡಿಯೋದಲ್ಲಿ ನಡೆಯಲಿದ್ದು, ನೇರ ಪ್ರಸಾರಗೊಳ್ಳಲಿದೆ ಎಂದು ಸಮಿತಿ ಸದಸ್ಯ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 3.30ರಿಂದ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ, ದಿವಾಕರ ಆಚಾರ್ಯ ಪೊಳಲಿ ಭಾಗವತಿಕೆಯಲ್ಲಿ ಯಕ್ಷಗಾನ ಸ್ವರಾಭಿಷೇಕ ನಡೆಯಲಿದೆ. ಮದ್ದಳೆಯಲ್ಲಿ ಉಳಿತ್ತಾಯ, ಲವಕುಮಾರ್ ಐಲ, ಚೆಂಡೆಯಲ್ಲಿ ಲೋಕೇಶ್ ಕಟೀಲು, ಯೋಗೀಶ್ ಆಚಾರ್ಯ ಉಳೇಪಾಡಿ, ಚಕ್ರತಾಳದಲ್ಲಿ ಚೇತನ್ ಸಚ್ಚರಿಪೇಟೆ, ನಾಟ್ಯದಲ್ಲಿ ಲಕ್ಷ್ಮಣ ಕುಮಾರ್ ಮರಕಡ, ರಕ್ಷಿತ್ ಶೆಟ್ಟಿ ಪಡ್ರೆ ಭಾಗವಹಿಸಲಿದ್ದಾರೆ ಎಂದರು.

ಹಿಮ್ಮೇಳ ವಾದಕರಾಗಿ ಮೂರು ದಶಕಗಳ ಕಾಲ ಪ್ರಬುದ್ಧ ಕಲಾ ಸೇವಕರಾಗಿ ಜನಜನಿತರಾಗಿದ್ದ ಕಡಬ ನಾರಾಯಣ ಆಚಾರ್ಯ ತಮ್ಮ 51ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಅವರ ಪುತ್ರ ವಿನಯ ಆಚಾರ್ಯ ತಂದೆಯಂತೆಯೇ ಪ್ರತಿಭೆ ಹಾಗೂ ಪ್ರಸಿದ್ಧಿ ಹೊಂದಿ ಉತ್ತುಂಗಕ್ಕೇರುವ ವೇಳೆಯಲ್ಲಿ 2019ರಲ್ಲಿ ವಿಧಿವಶರಾದರು. ಇವರಿಬ್ಬರ ಪ್ರತಿಭೆ ಹಾಗೂ ಹೆಸರು ಜನಮಾನಸದಲ್ಲಿ ಉಳಿಸುವ ಉದ್ದೇಶದಿಂದ ಕಡಬ ಸಂಸ್ಮರಣಾ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ, ಕೋಶಾಧಿಕಾರಿ ಡಿ.ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net