ಕಲೆಗಳಿಂದ ಮಾನವತ್ವ ಉಳಿದಿದೆ

harikatha
Published on

ಹುಬ್ಬಳ್ಳಿ: ದೇವರು ಇದ್ದಾನೆ ಎಂಬ ಕಲ್ಪನೆಯಿಂದ ರಾಕ್ಷಸಿ ಗುಣಗಳು ಅಳಿದು ಮಾನವತ್ವ ನೆಲೆಸಿದೆ. ನಮ್ಮ ಕಲೆ, ಸಂಸ್ಕೃತಿಯಿಂದ ಇಂದು ಮಾನವತ್ವ ಉಳಿದಿದೆ ಎಂದು ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಎಂ.ಎಂ. ಸುಬ್ರಹ್ಮಣ್ಯ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹರಿದಾಸ ನೀವಣೆ ಗಣೇಶ ಭಟ್ಟ ಹರಿಕಥಾ ಅಕಾಡೆಮಿಯ ಹರಿಕಥಾ ಶಿಕ್ಷಣ ಕೇಂದ್ರ ವತಿಯಿಂದ ಶನಿವಾರ ಆಯೋಜಿಸಿದ್ದ ಹರಿಕಥಾ ರಂಗ ಪ್ರವೇಶ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ‘ಸಮಾಜಕ್ಕೆ ಹರಿಕಥೆಯ ಕೊಡುಗೆ ಮತ್ತು ಅವಶ್ಯಕತೆ’ ಕುರಿತು ಮಾತನಾಡಿದ ಅವರು, ರಾಮಾಯಣ-ಮಹಾಭಾರತವು ಸುಳ್ಳು ಎಂದು ಹೇಳುವ ಬುದ್ಧಿಜೀವಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ. ನೃತ್ಯ, ಸಂಗೀತ, ಹರಿಕಥೆ, ಇತ್ಯಾದಿಗಳು ದೇವರ ಇರುವಿಕೆಯನ್ನು ಬಿಂಬಿಸುತ್ತದೆ ಎಂದರು.

ಹರಿಕಥೆಯು ದಕ್ಷಿಣ ಭಾರತದಲ್ಲಿ 200-250 ವರ್ಷಗಳಿಂದ ಜನಪ್ರಿಯತೆ ಪಡೆದುಕೊಂಡು ಬಂದಿದೆ. ಸಂಪೂರ್ಣ ಭಾರತದಲ್ಲಿ ಹರಿಕಥೆಯು ಬೇರೆ ಬೇರೆ ರೂಪದಲ್ಲಿ ಜನಪ್ರಿಯತೆ ಪಡೆದಿದೆ. ಇಂದು ಇಲ್ಲಿ 20 ಮಕ್ಕಳು ಹರಿಕಥಾ ರಂಗ ಪ್ರವೇಶ ಮಾಡುತ್ತಿರುವುದು ಈ ಕಲೆಗೆ ಕೊನೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಹಾದಗಲ್ ಲಕ್ಷ್ಮೀನಾರಾಯಣ ಭಟ್ಟ ಮಾತನಾಡಿ, ಅಲಂಕಾರಕ್ಕೆ ನೈಸರ್ಗಿಕವಾದ ಮಾವಿನ ತೋರಣದ ಬದಲು ಪ್ಲಾಸ್ಟಿಕ್ ತೋರಣವನ್ನು ಬಳಸುತ್ತಿದ್ದೇವೆ. ಹಬ್ಬ, ಸಂಭ್ರಮದ ದಿನಗಳಲ್ಲಿ ಹೋಟೆಲ್ ಅಡುಗೆಯನ್ನು ಆರ್ಡರ್ ಮಾಡುವಂಥ ಕೃತಕ ಜೀವನಶೈಲಿಯಿಂದ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಪಾಶ್ಚಿಮಾತ್ಯ ಮಾನಸಿಕತೆಯನ್ನು ನಾವಿಂದು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದರು.

ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಸಂಸ್ಥೆಯ ಶ್ರೀಧರ ಉಡುಪ ಉದ್ಘಾಟಿಸಿದರು. ಕಲಾರತ್ನ ಶಂಕರ ನಾರಾಯಣ ಅಡಿಗ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು. ಹಿಂದು ಸೇವಾ ಪ್ರತಿಷ್ಠಾನದ ಸಂಚಾಲಕ ಸೀತಾರಾಮ ಕೆದಿಲಾಯ, ಇದ್ದರು. ಅಕಾಡೆಮಿ ಸಂಸ್ಥಾಪಕಿ ನಾಗರತ್ನ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶ್ರೇಯಾ ಭಟ್ ಪ್ರಾರ್ಥನೆ ಹಾಡಿದರು. ಹರಿಕಥಾ ವಿದುಷಿ ಪ್ರತಿಮಾ ಕೋಡೂರು ನಿರೂಪಿಸಿದರು. ಅಕಾಡೆಮಿ ಸಂಚಾಲಕ ದಯಾನಂದ ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net