ಹರಿಹರಪುರ ಶ್ರೀಗಳ ವರ್ಧಂತಿ ಮಹೋತ್ಸವ, ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮ

IMG_20240629_164217_689.jpg
Published on

ಹುಬ್ಬಳ್ಳಿ: ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠದ ಪೀಠಾಧಿಪತಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ವರ್ಧಂತಿ ಮಹೋತ್ಸವ ಅಂಗವಾಗಿ ಜುಲೈ 1ರಿಂದ ಮೂರು ದಿನಗಳ ವರೆಗೆ ನಗರದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶ್ರೀ ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆ ಮತ್ತು ವಿವಿಧ ಸೇವಾ ಸಂ ಸಂಸ್ಥೆಗಳು, ಭಜನಾ ಮಂಡಳಿ ಹಾಗೂ ಭಕ್ತವೃಂದದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.

ಜುಲೈ 1ರಂದು ಸಂಜೆ 4ಕ್ಕೆ ಶ್ರೀಗಳ ಪುರ ಪ್ರವೇಶ ಆಗಲಿದೆ. ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ನಿಂದ ಗೋಕುಲ ರೋಡ್ ಹವ್ಯಕ ಭವನದ ವರೆಗೆ ಬೈಕ್ ರ್ಯಾಲಿ ಮೂಲಕ ಶ್ರೀಗಳನ್ನು ಸ್ವಾಗತಿಸಲಾಗುವುದು. ಸಂಜೆ 6.30ಕ್ಕೆ ಹವ್ಯಕ ಸಾಂಸತಿಕ ಭವನದಲ್ಲಿ ಶ್ರೀಗಳಿಂದ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದ್ದು, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವರು ಎಂದರು.

ಜುಲೈ 2ರಂದು ಸಂಜೆ 4ಕ್ಕೆ ಹವ್ಯಕ ಭವನದಿಂದ ಗೋಕುಲ ಗಾರ್ಡನ್ವರೆಗೆ ಶೋಭಾಯಾತ್ರೆ ನಡೆಯಲಿದೆ. ಶ್ರೀಗಳನ್ನು ರ್ಪೂಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಗೋಕುಲ ಗಾರ್ಡನ್ನಲ್ಲಿ ಧೂಳೀಪಾದಪೂಜೆ ನಡೆಯಲಿದೆ. ಸಂಜೆ 5.30ಕ್ಕೆ ಹವ್ಯಕ ಭವನದಲ್ಲಿ ಶ್ರೀಗಳಿಂದ ಶ್ರೀಚಕ್ರ ನವಾವರಣ ಪೂಜೆ ನೆರವೇರುವುದು.

ಜುಲೈ 3ರಂದು ಬೆಳಗ್ಗೆ 7.30ಕ್ಕೆ ಹವ್ಯಕ ಸಾಂಸತಿಕ ಭವನದಲ್ಲಿ ಶ್ರೀಗಳ ವಿಶೇಷ ಆಹ್ನಿಕ ದರ್ಶನ ನಡೆಯಲಿದೆ. ಬೆಳಗ್ಗೆ 9.30ಕ್ಕೆ ನರಸಿಂಹ ಸಹಸ್ರನಾಮದ ಸಮರ್ಪಣೆ, ಬೆಳಗ್ಗೆ 10.30ಕ್ಕೆ ಗೋಕುಲ ಗಾರ್ಡನ್ನಲ್ಲಿ ಚಂಡಿಕಾ ಹೋಮ, ಆಯುಷ್ಯ ಹೋಮ, ಪವಮಾನ ಸೂಕ್ತ ಹೋಮ ಮತ್ತು ಗುರು ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳು ಆಶೀರ್ವಚನ ನೀಡುವರು. ಜನಪ್ರತಿನಿಧಿಗಳು ಭಾಗವಹಿಸುವರು.

ಮಧ್ಯಾಹ್ನ 12.30ಕ್ಕೆ ಶ್ರೀಗಳಿಗೆ ಭಕ್ತರು ಭಿಕ್ಷಾವಂದನೆ ಸಮರ್ಪಣೆ ಮಾಡುವರು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮಹೋತ್ಸವದ ನೇತೃತ್ವ ವಹಿಸಿರುವ ಅವಧೂತ ರಮೇಶ ಗುರೂಜಿ ಅವರು ಮಾತನಾಡಿ, ಶ್ರೀಗಳ ಆಹ್ನಿಕ ದರ್ಶನ ಎಂಬುದು ಸಾರ್ವಜನಿಕರಿಗೆ ವಿಶೇಷವಾದದ್ದು. ಇದು ಸನ್ಯಾಸಿಗಳ ಸಾಧನೆಯಾಗಿರುತ್ತದೆ. ಸಂರ್ಪೂಣ ಒಂದೂವರೇ ತಾಸು ಶ್ರೀಗಳು ನಿಶ್ಚಲ ಸ್ಥಿತಿಯಲ್ಲಿ ಹಠಯೋಗದಲ್ಲಿ ಕುಳಿತುಕೊಳ್ಳುತ್ತಾರೆ.

ಇದನ್ನು ಶ್ರೀಗಳು ವರ್ಷಕ್ಕೆ ಒಂದು ಬಾರಿ ಮಾಡುತ್ತಾರೆ. ಇಂತಹ ಅವಕಾಶವನ್ನು ನೋಡುವ ಭಾಗ್ಯ ಈ ಭಾಗದ ಜನರಿಗೆ ಸಿಕ್ಕಿದೆ. ಭಕ್ತಿ ಶ್ರದ್ಧೆಯಿಂದ ಜನರು ದರ್ಶನ ಮಾಡಿಕೊಳ್ಳಬೇಕು. ಮಾನವೀಯತೆ, ಎಲ್ಲರೂ ಸಮಾನರು ಎಂಬ ಅದ್ವೈತ ಸಿದ್ಧಾಂತದಂತೆ ಶ್ರೀಗಳು ನಡೆದವರು ಎಂದು ಹೇಳಿದರು.

ಸಮಿತಿ ಕಾರ್ಯಾಧ್ಯಕ್ಷ ಸುರೇಶ ಶೇಜವಾಡಕರ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಅಪ್ಪಯ್ಯ ನಾಲತವಾಡಮಠ, ಕಾರ್ಯದರ್ಶಿ ವೀಣಾ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net