

ಜಯಪುರ: ಜಯಪುರದ ಭದ್ರಿಯಾ ಜುಮ್ಮಾ ಮಸೀದಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಸಹಬಾಳ್ವೆಗೆ ನಾಂದಿಯಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಂಗಳವಾರ ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಿಂದ 2.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಎಲ್ಲ ಸಮುದಾಯಗಳ ಮಂದಿರ, ಮಸೀದಿ ಹಾಗೂ ಚರ್ಚ್‌ಗಳಿಂದ ಇಂತಹ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆದಾಗ ಸಮಾಜದಲ್ಲಿ ಧರ್ಮಗಳ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಆಟಗಳು ನಡೆಯುವುದಿಲ್ಲ. ಹಾಗಾಗಿ ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಹರಿಹರಪುರ, ಜಯಪುರ ಹಾಗೂ ಶೃಂಗೇರಿ ಪಟ್ಟಣದ ರಸ್ತೆ ವಿಸ್ತರಣೆ ಕುರಿತು ವರ್ತಕರ ಸಭೆ ಕರೆದು ಶೀಘ್ರದಲ್ಲಿ ನಿರ್ದಿಷ್ಟವಾಗಿ ಸ್ಥಳ ಗುರುತಿಸಲಾಗುವುದು. ಫಾರ್ಮ್ ನಂ.57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಕಂದಾಯ ಇಲಾಖೆಯಲ್ಲಿ ಮಂಜೂರು ಮಾಡಲು ಕೆಲವು ಷರತ್ತುಗಳು ಅಡ್ಡಿಯಾಗಿದೆ. ಕಾಫಿ, ಭತ್ತ ಬೆಳೆದವರು ಫಾರ್ಮ್ 57 ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಬಗ್ಗೆ ಮಲೆನಾಡು ಭಾಗದ ಶಾಸಕರ ನಿಯೋಗ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದು. ಈ ಕಾರಣಕ್ಕಾಗಿಅರ್ಜಿ ತಿರಸ್ಕರಿಸಬಾರದು ಎಂದು ತಹಸೀಲ್ದಾರ್‌ಗಳಿಗೆ ತಿಳಿಸಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಮುಖಂಡರಾದ ಡಿ.ಬಿ.ರಾಜೇಂದ್ರ, ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಪಿಡಿಒ ಜೆ.ಕೆ.ಶಿವಕುಮಾರ್, ಫಣಿರಾಜ್, ನಾರ್ವೇ ನಿಸಾರ್ ಆಹಮ್ಮದ್, ಮಸೀದಿ ಅಧ್ಯಕ್ಷ ಅಬೂಬಕ್ಕರ್, ಸಹ ಕಾರ್ಯದರ್ಶಿ ಖಾದರ್, ಇಸ್ಮಾಯಿಲ್ ಮಕ್ಕಿಕೊಪ್ಪ, ಅಬ್ದುಲ್ ಲತ್ೀ ಇದ್ದರು.