

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯ
ಹೊಳೆನರಸೀಪುರ: ಸಮೀಪದ ಹರಿಹರಪುರದಲ್ಲಿ ಪುನರುತ್ಥಾನಗೊಂಡ ಶ್ರೀ ಲಕ್ಷ್ಮೀ ಮಾಧವ ಕೃಷ್ಣ ದೇವಾಲಯದ ಲೋಕಾರ್ಪಣೆ, ಮರು ಪ್ರತಿಷ್ಠಾಪನಾ ಉತ್ಸವ ಮತ್ತು ಬ್ರಹ್ಮ ಕುಂಭಾಭಿಷೇಕ ಸಮಾರಂಭ ಮಾ. 26ರಿಂದ 28ರ ವರೆಗೆ ಆಯೋಜನೆಗೊಂಡಿದೆ. ಶ್ರೀ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನೆರವೇರಲಿದೆ. ಸುಮಾರು 800 ವರ್ಷ ಪುರಾತನ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿತ್ತು. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಗಿಡ, ಮರಗಳು ಬೆಳೆದು ಶಿಥಿಲಾವಸ್ಥೆ ತಲುಪಿತ್ತು. ಕಳೆದ 2 ವರ್ಷದಿಂದ ದೇಗುಲ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಇದೀಗ ಸನ್ನಿಧಿ ಸೇವೆಗೆ ಸಮರ್ಪಣೆ ಯಾಗಲಿದೆ. 26ರಂದು ಬೆಳಗ್ಗೆ 9ಕ್ಕೆ ಗಣಪತಿ ಪೂಜೆಯೊಂದಿಗೆ ಮರು ಪ್ರತಿಷ್ಠಾಪನಾ ಉತ್ಸವ ಚಾಲನೆಗೊಳ್ಳಲಿದೆ. ನಂತರ ನಾಂದಿ ಮಹಾ ಸಂಕಲ್ಪ, ಬಿಂಬ ಶುದ್ಧಿ ಹೋಮ ಇತ್ಯಾದಿ ವಿಧಿಗಳು ನೆರವೇರಲಿವೆ. 27ರಂದು ರತ್ನನ್ಯಾಸಪೂರ್ವಕ ದೇವರ ಪ್ರತಿಷ್ಠೆ, ಕಲಾ ತತ್ವ ಹೋಮ, ಜೀವ ಕುಂಭಾಭಿಷೇಕ, 108 ಬ್ರಹ್ಮ ಕುಂಭ ಪ್ರತಿಷ್ಠೆ ಅಧಿವಾಸ ಹೋಮ ಸಂಪನ್ನಗೊಳ್ಳಲಿದೆ. ಅಂದು ಸಂಜೆ 5ಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ಹಮ್ಮಿಕೊಳ್ಳಲಾಗಿದೆ. ನಂತರ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.
ಬ್ರಹ್ಮ ಕುಂಭಾಭಿಷೇಕ: 28ರಂದು ಶ್ರೀ ಜಗದ್ಗುರುಗಳು ಶ್ರೀ ಲಕ್ಷ್ಮೀ ಮಾಧವ ಕೃಷ್ಣ ದೇವರಿಗೆ ಬ್ರಹ್ಮ ಕುಂಭಾಭಿಷೇಕ ಮಹಾಪೂಜೆ ನೆರವೇರಿಸಿ ನಂತರ ಶ್ರೀ ಶಂಕರ ಮಠದ ಶಂಕರ ಕೃಪಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.ಭಕ್ತರು 3 ದಿನಗಳ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಎಸ್. ವೇಣುಗೋಪಾಲ ತಿಳಿಸಿದ್ದಾರೆ.