ಹರಹರಪುರದಲ್ಲಿ ಜಾತ್ರಾ ಮಹೋತ್ಸವ - ಸಿಡಿ ಉತ್ಸವ ಇಲ್ಲ

22.3
Published on

ಹೊಳೆನರಸೀಪುರ: ಹಳೇಕೋಟೆ ಹೋಬಳಿ ಹರಹರಪುರ ಗ್ರಾಮದ ದುರ್ಗಾಪರಮೇಶ್ವರಿ, ಉಡಸಲಮ್ಮ ಜಾತ್ರಾ ಮಹೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ಬಾರಿಯೂ ಸುತ್ತ ಮುತ್ತಲ 7 ಹಳ್ಳಿಯ ಬಂಡಿ, ಮೂರೂರಿನ ತೇರು, ಬೀರನಹಳ್ಳಿ ಹೂವಿನ ಬಂಡಿಯನ್ನು ಅಲಂಕಾರ ಮಾಡಿ ಪೂಜಿಸಿ ಶ್ರದ್ಧಾಭಕ್ತಿಯಿಂದ ಜಾತ್ರೆ ನೆರವೇರಿಸಲಾಯಿತು. ನೂರಾರು ಜನರು ಬಂಡಿಗೆ ಎಡೆ ಇಟ್ಟು ಪೂಜಿಸಿದರು. ದೇವಾಲಯದ ಮುಂದೆ ಹಾಕಲಾಗಿದ್ದ ಕೆಂಡದ ಹೊಂಡದಲ್ಲಿ ಬಂಡಿಗಳು, ರಥ, ಹರಕೆ ಹೊತ್ತ ಜನರು ಹಾಯ್ದು ಭಕ್ತಿ ಸಮರ್ಪಿಸಿದರು. ದೇವಾಲಯದಲ್ಲಿ ಪೂಜೆ, ಮಹಾಮಂಗಳಾರತಿ ನಂತರ ಜಾತ್ರೆಗೆ ಬಂದ ಭಕ್ತರಿಗೆ ಅನ್ನಸಂರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸಿಡಿ ಉತ್ಸವ ನಡೆಯಲಿಲ್ಲ : ಸಿಡಿ ಹಾರಿಸಬೇಕೆ, ಬೇಡವೇ ಎನ್ನು ವಿಚಾರದಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಡಿವೈಎಸ್ಪಿ ಶಾಲು ಅವರು ಗ್ರಾಮಕ್ಕೆ ಧಾವಿಸಿ ಸಿಡಿ ಉತ್ಸವ ಆಚರಿಸದಂತೆ ಮುಖಂಡರಿಗೆ ಮನ ಒಲಿಸಿದರು. ಹಾಗಾಗಿ ಈ ಬಾರಿ ಸಿಡಿ ಉತ್ಸವ ನಡೆಯಲಿಲ್ಲ.

ಉಪ ವಿಭಾಗಾಧಿಕಾರಿ ಮಾರುತಿ, ಕಂದಾಯ ನಿರೀಕ್ಷಕ ಯೋಗಾನಂದ, ಗ್ರಾಮಾಧಿಕಾರಿ ಗುರುಮೂರ್ತಿ ಗ್ರಾಮದಲ್ಲಿದ್ದು, ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಲು ಸಹಕರಿಸಿದರು.

ಗ್ರಾಮದ ಮುಖಂಡರಾದ ಎಚ್.ಕೆ. ಮಹೇಶ್, ಜೈಪ್ರಕಾಶ್. ಎಚ್.ಜೆ. ರಾಮೇಗೌಡ, ಹರೀಶ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಶಿವಣ್ಣ, ವಿವಿಧ ಗ್ರಾಪಂ ಸದಸ್ಯರಾದ ಮೋಹನ್, ವೀಣಾ, ಭಾಗ್ಯಮ್ಮ, ಮಾಜಿ ಅಧ್ಯಕ್ಷೆ ರಂಗಮ್ಮ. ದೇವರಾಜು, ಜಂಬೂರಯ್ಯ, ಲಕ್ಷ್ಮಮ್ಮ ಜವರಪ್ಪ ಭಾಗವಹಿಸಿದ್ದರು. ಬಂದೋಬಸ್ತ್‌ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net