

ಲಕ್ಕೂರು: ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಜಿಲ್ಲೆಯ ಖ್ಯಾತ ಸಾಹಿತಿ ಪುಸ್ತಕ ಮನೆ ಹರಿಹರಪ್ರಿಯ 2020ರಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಹೂಡಿದ್ದ ಕೃತಿಚೌರ್ಯ ಪ್ರಕರಣದ ಕಾನೂನು ಹೋರಾಟದಲ್ಲಿ ಸಾಹಿತಿ ಪರ ನ್ಯಾಯಾಲಯ ಆದೇಶ ನೀಡಿದೆ.
ಹರಿಹರ ಪ್ರಿಯ ಅವರು ಸಂಗ್ರಹಿಸಿದ್ದ ಕುವೆಂಪು ಅವರ ಸಮಗ್ರ ಪತ್ರಗಳ ಪುಸ್ತಕವನ್ನು ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗ ಮೂಲಕ ಪ್ರಕಟ ಮಾಡಿತ್ತು. ಇದರ ವಿರುದ್ಧ ಹರಿಹರಪ್ರಿಯ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.
ನ್ಯಾಯಾಲಯ ಕನ್ನಡ ವಿಶ್ವವಿದ್ಯಾಲಯಕ್ಕೆ ಛೀಮಾರಿ ಹಾಕಿದ್ದು, ಸದರಿ ಪುಸ್ತಕದಲ್ಲಿ ಸಾಹಿತಿ ಹರಿಹರಪ್ರಿಯ ಅವರ ಹೆಸರನ್ನು ಹಾಕಬೇಕು. ಇಲ್ಲವಾದಲ್ಲಿ ಕುವೆಂಪು ಪತ್ರಗಳನ್ನು ಪುಸ್ತಕದಿಂದ ತೆಗೆದು ಹಾಕಬೇಕು ಎಂದು ಜೂ.11ರಂದು ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 1971 ರಿಂದ 1974 ರವರೆಗೂ ಜ್ಞಾನಪೀಠ ಪುರಸತ ಕುವೆಂಪು ಅವರ ಸಮಗ್ರ ಪತ್ರಗಳನ್ನು ಸಂಗ್ರಹ ಮಾಡಿ 1974ರಲ್ಲಿ "ಕುವೆಂಪು ಪತ್ರಗಳು' ಪುಸ್ತಕವನ್ನು ಹರಿಹರಪ್ರಿಯ ಬಿಡುಗಡೆ ಮಾಡಿದ್ದರು. 2009ರಲ್ಲಿ ಮರು ಮುದ್ರಣ ಮಾಡಿ 2ನೇ ಬಾರಿಗೆ ಪುಸ್ತಕ ಪ್ರೇಮಿಗಳ ಕೈಗಿಟ್ಟಿದ್ದರು. ಆದರೆ, 2020ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹರಿಹರಪ್ರಿಯ ಅವರ ಪುಸ್ತಕವನ್ನು ಕೃತಿ ಚೌರ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಕೀಲ ಎಂ.ಶಿವಪ್ರಕಾಶ್ ಮೂಲಕ ದಾವೆ ಹೂಡಿ ಸತತ 4 ವರ್ಷಗಳ ಕಾನೂನು ಹೋರಾಟ ಮಾಡಿ ಗೆಲುವು ಕಂಡುಕೊಂಡಿದ್ದಾರೆ.
ಇನ್ನು ಮುಂದೆ ಸಾಹಿತ್ಯ ಕೃಷಿ ಮಾಡಲು ತೊಡಗಿದರೆ ಕರ್ನಾಟಕದ ಮಿಕ್ಕೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಡಗಿ ಕೂತಿರುವ ಪ್ರಾಧ್ಯಾಪಕ ವರ್ಗದವರೂ ಸೆರೆಮನೆ ಸೇರಬೇಕಾದೀತು. ಆದ್ದರಿಂದ, ಇಲ್ಲಿಗೆ ಈ ಬಗೆಯ ಸಾಂಸತಿಕ ಕ್ರಿಯಾಶೀಲತೆ ನಿಲ್ಲಿಸುವ ಪ್ರಮಾಣ ಮಾಡುತ್ತಿದ್ದೇನೆ. ಕಾನೂನು ಹೋರಾಟದಲ್ಲಿ ಗೆಲುವು ನಮ್ಮದಾಗಿದ್ದು, "ಕುವೆಂಪು ಪತ್ರಗಳು' ಕೃತಿಯ ಮೂರನೇ ಮುದ್ರಣ ಬಿಡುಗಡೆ ಮಾಡಲಾಗುವುದು.
- ಹರಿಹರಪ್ರಿಯ, ಸಾಹಿತಿ
ಕುವೆಂಪು ಅವರು ನಾಡಿನ ಜನರಿಗೆ ಬರೆದ ಕಾಗದಗಳೆನ್ನೆಲ್ಲ ಕಲೆ ಹಾಕುವ ಯೋಜನೆ ಬಂದದ್ದೆ ದೊಡ್ಡ ಸಂಗತಿ. ಹಲವು ಸ್ಥಳಗಳಿಗೆ ಭೇಟಿ ನೀಡಿ ಶ್ರಮಪಟ್ಟು ಸಂಗ್ರಹಿಸಿ 1974ರಲ್ಲಿಯೇ ಹರಿಹರಪ್ರಿಯ ಪುಸ್ತಕ ಪ್ರಕಟಿಸಿದ್ದರು. ಅದನ್ನು ವಿಶ್ವವಿದ್ಯಾಲಯವು ಕೃತಿಚೌರ್ಯ ಮಾಡಿದ್ದು ಅಪರಾಧ.
ಕೋ.ಚನ್ನಬಸಪ್ಪ
ನ್ಯಾಯವಾದಿ